ಮನೆ ರಾಷ್ಟ್ರೀಯ ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಉಚಿತ ಚಿಕಿತ್ಸೆ!

ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಉಚಿತ ಚಿಕಿತ್ಸೆ!

0

ನವದೆಹಲಿ : ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ತಕ್ಷಣದ ಚಿಕಿತ್ಸೆಯು ವಿಳಬವಾಗದಂತೆ ದೊರೆಯಬೇಕೆಂಬ ಉದ್ದೇಶದಿಂದ, ಕೇಂದ್ರ ಸರ್ಕಾರವು ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಪ್ರತಿ ಅಪಘಾತ ಸಂತ್ರಸ್ತನಿಗೆ ರೂ. 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಈ ಯೋಜನೆ ಈಗ ದೇಶದಾದ್ಯಂತ ಅನುಷ್ಠಾನಕ್ಕೆ ಬರಲಿದೆ.

ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ, ಅಪಘಾತದ ಬಳಿಕ ಅತೀಮುಖ್ಯವಾದ ಗೋಲ್ಡನ್ ಅವರ್ ಎಂಬ ಈ ಮೊದಲಿನ ಕೆಲ ಗಂಟೆಗಳಲ್ಲಿ ತಕ್ಷಣ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಲು ನೆರವಾಗುವುದು. ಇನ್ನು ಮುಂದೆ ಅಪಘಾತದ ವೇಳೆ ಹಣದ ಕೊರತೆಯಿಂದ ಚಿಕಿತ್ಸೆ ವಿಳಂಬವಾಗುವ ಸಂಭವ ಕಡಿಮೆಯಾಗಲಿದೆ.

ಅಪಘಾತದ ದಿನಾಂಕದಿಂದ ಗರಿಷ್ಠ ಏಳು ದಿನಗಳವರೆಗೆ ಗಾಯಾಳುಗಳು ಯಾವುದೇ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ಪ್ರತಿ ವ್ಯಕ್ತಿಗೆ 1.5 ಲಕ್ಷ ರೂ.ಗಳವರೆಗಿನ ವೆಚ್ಚಗಳಿಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯೋಜನೆ ಯಾವುದೇ ವರ್ಗ, ಧರ್ಮ, ವರ್ಣ ಅಥವಾ ಆರ್ಥಿಕ ಹಿನ್ನಲೆಯಲ್ಲಿ ಅನ್ವಯವಾಗದೇ, ಎಲ್ಲಾ ಭಾರತೀಯರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಪಾದಚಾರಿಗಳಿಂದ ಹಿಡಿದು ವಾಹನ ಸವಾರರು, ಸೈಕಲ್ ಸವಾರರು ಮತ್ತು ಇತರರು ಸಹ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಸರ್ಕಾರದ ಉದ್ದೇಶ – ಅಪಘಾತದ ಬಳಿಕ ಯಾವುದೇ ವ್ಯಕ್ತಿಯು ಹಣದ ಕೊರತೆಯಿಂದ ಚಿಕಿತ್ಸೆ ಪಡೆಯದೇ ಸಾವಿಗೆ ಒಳಗಾಗಬಾರದು ಎಂಬುದಾಗಿದೆ. “ಈ ಯೋಜನೆಯ ಯಶಸ್ಸಿಗೆ ಸಾರ್ವಜನಿಕ ಜಾಗೃತಿಯು ಬಹಳ ಅಗತ್ಯ. ರಾಜ್ಯ ಸರ್ಕಾರಗಳು, ಸಾರ್ವಜನಿಕರು ಹಾಗೂ ಆಸ್ಪತ್ರೆಗಳು ಇದರ ಅನುಷ್ಠಾನಕ್ಕೆ ಸಹಕರಿಸಬೇಕು” ಎಂದು ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಯೋಜನೆ ಜಾರಿಗೆ ಸಂಬಂಧಪಟ್ಟಂತೆ ನೋಂದಾಯಿತ ಆಸ್ಪತ್ರೆಗಳ ಪಟ್ಟಿ ಹಾಗೂ ಆನ್‌ಲೈನ್ ಪೋರ್ಟಲ್ ಅಳವಡಿಸುವ ಕೆಲಸವೂ ಪ್ರಗತಿಯಲ್ಲಿ ಇದೆ. ಈ ಮೂಲಕ ಆಸ್ಪತ್ರೆಗಳು ನೇರವಾಗಿ ಖರ್ಚುಗಳಿಗೆ ಸರಕಾರದಿಂದ ಹಣ ಪಡೆಯಲು ಸಾಧ್ಯವಾಗುತ್ತದೆ.