ಮನೆ ಸ್ಥಳೀಯ ಜಾತಿ ಗಣತಿ ವರದಿ: ಯಥಾಸ್ಥಿತಿ ಅನುಷ್ಠಾನಕ್ಕೆಅಹಿಂದಾ ಮುಖಂಡ ಎನ್.ಬಸವರಾಜು ಆಗ್ರಹ

ಜಾತಿ ಗಣತಿ ವರದಿ: ಯಥಾಸ್ಥಿತಿ ಅನುಷ್ಠಾನಕ್ಕೆಅಹಿಂದಾ ಮುಖಂಡ ಎನ್.ಬಸವರಾಜು ಆಗ್ರಹ

0

ಮೈಸೂರು : ಸರ್ಕಾರ ೧೯೬ ಕೋಟಿ ರಾಜ್ಯದ ಜನರ ತೆರಿಗೆ ಹಣ ಖರ್ಚು ಮಾಡಿ ತಯಾರಿಸಿರುವ ಜಾತಿ ಗಣತಿ ವರದಿಯನ್ನು ಯಥಾಸ್ಥಿತಿ ಅನುಷ್ಠಾನ ಮಾಡಬೇಕೆಂದು ಅಹಿಂದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಎನ್.ಬಸವರಾಜು ಆಗ್ರಹಿಸಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈ ವರದಿಯನ್ನು ವಿರೋಧಿಸುವ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನೂ ತಮ್ಮ ವೈಯುಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮತ್ತು ಅಹಿಂದಾ ವರ್ಗಗಳ ಶೇ.೯೦ ರಷ್ಟು ಮತಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿ ಇದೀಗ ತಮ್ಮ ತಮ್ಮ ಜಾತಿಗಳ ಪರವಾಗಿ ನಿಂತಿರುವುದು ಅಕ್ಷಮ್ಯ ಅಪರಾಧ.

ಜಾತಿಗಣತಿ ವರದಿಯನ್ನು ಚರ್ಚೆಗೆ ಒಳಪಡಿಸಬೇಕು. ನ್ಯೂನ್ಯತೆಗಳಿದ್ದರೆ ಸರಿಪಡಿಸಿ, ಆದರೆ ತೆರಿಗೆ ಹಣದಿಂದ ಸಿದ್ದಪಡಿಸಿದ ವರದಿಯನ್ನೇ ತಿರಸ್ಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಶೋಷಿತ ಸಮುದಾಯಗಳ ಮತಗಳಿಂದಲೇ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಈ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿಗಣತಿ ವರದಿ ಜಾರಿಯಾಗಬೇಕು ಎಂದು ಹೇಳಿದರು.

ವಿರೋಧಿಸುವ ಜನ ಪ್ರತಿನಿಧಿಗಳು ತಮ್ಮ ಸ್ವಜಾತಿ ಪ್ರೇಮವನ್ನು ಬದಿಗಿಟ್ಟು, ತಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದ ಶೋಷಿತ ಸಮುದಾಯದ ಅಭಿವೃದ್ಧಿಯ ಚಿಂತನೆ ನಡೆಸಬೇಕು. ಅಥವಾ ಸ್ವತಂತ್ರವಾಗಿ ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಈ ಬಗ್ಗೆ ನಾವು ರಾಜ್ಯವ್ಯಾಪಿ ಪ್ರಚಾರ ನಡೆಸುತ್ತೇವೆ ಎಂದು ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

೧೯೬ ಕೋಟಿ ಹಣ ಖರ್ಚು ಮಾಡಿ, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಇಡೀ ಆಡಳಿತ ವ್ಯವಸ್ಥೆ ಜಾತಿ ಗಣತಿ ಸಮೀಕ್ಷೆಯಲ್ಲಿ ದುಡಿದಿದೆ. ಅತ್ಯಂತ ವ್ದೈಜ್ಞಾನಿಕವಾಗಿ ಎಚ್.ಕಾಂತರಾಜು ನೇತೃತ್ವದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ(ಜಾತಿಗಣತಿ) ವರದಿಯನ್ನು ಅವೈಜ್ಞಾನಿಕ ಎನ್ನುವವರು ತಮ್ಮ ಬಳಿ ಯಾವ ವೈಜ್ಞಾನಿಕ ದಾಖಲೆ ಇದೆ ಎನ್ನುವುದನ್ನಾದರೂ ತಿಳಿಸಿ, ರಾಜ್ಯ ಸರ್ಕಾರದ ಮುಖ್ಯಸ್ಥರೂ ಆದ ಮುಖ್ಯಮಂತ್ರಿಗಳು ಇದ್ಯಾವುದಕ್ಕೂ ಮಣೆ ಹಾಕದೆ ವರದಿಯನ್ನು ಯಾಥಾಸ್ಥಿತಿಯಲ್ಲಿ ಅನುಷ್ಠಾನ ಮಾಡಬೇಕು ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಾವೂ ಧರಣಿ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರಲ್ಲದೇ, ಇನ್ನು ಮುಂದೆ ಜನಪ್ರತಿನಿಧಿಗಳು ಜಾತಿಗಣತಿ ವರದಿಯನ್ನು ವಿರೋಧಿಸಿದ್ದಲ್ಲಿ, ಅವರನ್ನು ಘೇರಾವ್ ಮಾಡಲಾಗುತ್ತದೆ ಎಂದು ಸಹ ಹೇಳಿದರು.

ಈ ಹಿಂದೆ ಪ್ರಬಲ ಸಮುದಾಯಗಳು ಯಾವುದೇ ವರದಿಗಳನ್ನು ಜಾರಿ ಮಾಡುವಲ್ಲಿ ವಿರೋಧ ವ್ಯಕ್ತಪಡಿಸಿ ತಡೆಹಿಡಿಯುತ್ತಿದ್ದವು. ಆಗ ಅವರನ್ನು ಎದುರಿಸಲು ನಮಗೆ ಶಕ್ತಿ ಇರಲಿಲ್ಲ. ಈಗ ಶೋಷಿತ ಸಮುದಾಯಗಳೆಲ್ಲವೂ ಸಂಘಟಿತವಾಗಿದ್ದು, ಪ್ರಬಲ ಸಮುದಾಯಗಳ ವಿರೋಧವನ್ನು ದಮನ ಮಾಡುತ್ತೇವೆ ಎಂದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ ೨೦೧೮ರಲ್ಲಿ ಸಿದ್ದವಾಗಿದೆ. ಹೀಗಾಗಿ ವರದಿಯನ್ನು ಹತ್ತು ವರ್ಷಗಳ ಹಿಂದೆ ಸಿದ್ದಪಡಿಸಿಲ್ಲ, ೪-೫ ವರ್ಷಗಳ ಹಿಂದೆ ಮಾತ್ರ ವರದಿ ಸಿದ್ದವಾಗಿದೆ. ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೧೫ರಲ್ಲಿ ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದ್ದರು. ಹೀಗಾಗಿ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯದಲ್ಲಿ ಜಾತಿಗಣತಿ ವರದಿಯನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕೆಲವರಿಗೆ ವಿರೋಧ ಮಾಡುವುದೇ ಒಂದು ಚಟವಾಗಿದೆ. ಜನಪ್ರತಿನಿಧಿಗಳು ಜಾತಿಗಣತಿ ವರದಿ ಜಾರಿಗೆ ವಿರೋಧ ಮಾಡಿದರೆ, ಮೊದಲು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಒಂದು ವೇಳೆ ಮನವರಿಕೆ ವಿಫಲವಾದರೆ ಅವರನ್ನು ಫೇರಾವ್ ಮಾಡುತ್ತೇವೆ. ಅವರು ಹೋಗುವ ಸಭೆ-ಸಮಾರಂಭಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ಹಾಗೆಯೇ ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸುತ್ತೇವೆ ಎಂದು ಸಹ ಬಸವರಾಜು ಹೇಳಿದರು.