ಮನೆ ರಾಜಕೀಯ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಗಣತಿ ವರದಿ ಮುನ್ನೆಲೆಗೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಗಣತಿ ವರದಿ ಮುನ್ನೆಲೆಗೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

0

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮುಡಾ ಹಗರಣವನ್ನು ಮರೆ ಮಾಚಲು ಜಾತಿ ಗಣತಿ ವರದಿ ಬಿಡುಗಡೆಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿಯಲ್ಲಿ ಏನಿರಬೇಕೆಂದು ಹೇಳಿ ಬರೆಸಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಯಾರೂ ಮನೆಗೆ ಬಂದೇ ಇಲ್ಲ ಎಂದು ಲಿಂಗಾಯತ, ಒಕ್ಕಲಿಗ ಮೊದಲಾದ ಸಮುದಾಯದವರು ಹೇಳಿದ್ದಾರೆ. ಕೆಲವೇ ಜಾತಿಗಳ ವೈಭವೀಕರಣ, ಇನ್ನೂ ಕೆಲವು ಜಾತಿಗಳ ಮೇಲೆ ದ್ವೇಷ ಹಾಗೂ ಅವೈಜ್ಞಾನಿಕತೆ ಇದರಲ್ಲಿ ಕಂಡುಬಂದಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಈ ವರದಿ ಬಗ್ಗೆ ಬಾಯಿ ಬಿಡಲಿಲ್ಲ. ಒಂದು ಕಡೆ ಮುಡಾ, ಮತ್ತೊಂದು ಕಡೆ ಜಾರಿ ನಿರ್ದೇಶನಾಲಯದ ತನಿಖೆ,‌ ಮತ್ತೊಂದು ಕಡೆ ಲೋಕಾಯುಕ್ತ‌ ತನಿಖೆ ನಡೆಯುತ್ತಿದೆ. ಇವೆಲ್ಲವನ್ನೂ ಮುಚ್ಚಿಹಾಕಲು ಈಗ ವರದಿಯನ್ನು ಹೊರತೆಗೆಯಲಾಗಿದೆ ಎಂದರು.

ಜನಸಂಖ್ಯಾ ಗಣತಿ ಜೊತೆಗೆ ಜಾತಿ ಗಣತಿ ಮಾಡಬೇಕೆಂದು ಕಾಂಗ್ರೆಸ್ ಸಲಹೆ ನೀಡಿದೆ. 10 ವರ್ಷವಾಗುತ್ತಾ ಬಂದರೂ ಜಾತಿ ಗಣತಿ ವರದಿ ಬಿಡುಗಡೆಯಾಗಿಲ್ಲ. ಆದರೂ ಇವರು ಪ್ರಧಾನಿಗೆ ಸಲಹೆ ‌ನೀಡಲು ಮುಂದಾಗಿದ್ದಾರೆ. ಶಾಮನೂರು ಶಿವಶಂಕರಪ್ಪ, ಡಾ.ಸುಧಾಕರ್, ಡಿ.ಕೆ.ಶಿವಕುಮಾರ್ ‌ಮೊದಲಾದವರು ಈ ವರದಿ ಬಿಡುಗಡೆಗೆ ವಿರೋಧ ಸೂಚಿಸಿದ್ದಾರೆ. ಕಾಂಗ್ರೆಸ್‌‌ನಲ್ಲಿನ ಗೊಂದಲ ಬಗೆಹರಿಸುವುದು ಬಿಟ್ಟು ಬಿಜೆಪಿ ‌ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಸಿಎಂ ಬದಲಾವಣೆ

ಮುಖ್ಯಮಂತ್ರಿ ‌ಬದಲಾವಣೆ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಬೆಳಗಾವಿಯ ಸಚಿವರು ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೋಡ್ ಶೋ ನಡೆಸುತ್ತಿದ್ದಾರೆ. ಡಾ.ಜಿ.ಪರಮೇಶ್ವರ್ ಮತ್ತಿತರರು ಕೂಡ ಸಿಎಂ‌ ಆಗಲು ಯತ್ನಿಸುತ್ತಿದ್ದಾರೆ. ಪಕ್ಷದ ವಿರುದ್ಧ ಮಾತಾಡಿದರೆ ನೋಟಿಸ್ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದು, ಅದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ. ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.

ಒಳ ಮೀಸಲಾತಿ ತರಲಿ

ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಈ ಕುರಿತು ಪ್ರಯತ್ನ ಮಾಡಿತ್ತು. ಮೀಸಲು ಪ್ರಮಾಣವನ್ನು ಪರಿಶಿಷ್ಟ ಜಾತಿಗೆ 3% ರಿಂದ 7% ಕ್ಕೆ ಏರಿಸಲಾಗಿತ್ತು. ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯ ನೀಡಿದ್ದೇ ಬಿಜೆಪಿ. ದಲಿತರು, ಹಿಂದುಳಿದವರ ಚಾಂಪಿಯನ್‌ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ಹರ್ಯಾಣ ಚುನಾವಣೆಯಲ್ಲಿ ಸೋತಿದೆ. ಬಿಜೆಪಿ ಎಂದಿಗೂ ಮೀಸಲು ವಿಚಾರದಲ್ಲಿ ಹಿಂದುಳಿದಿಲ್ಲ. ದಲಿತರ ಅಭಿವೃದ್ಧಿಗೆ ಬಿಜೆಪಿ ಸದಾ ಶ್ರಮಿಸಿದೆ. ದಲಿತರ ಪರವಾಗಿ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ ಎನ್ನುವುದಾದರೆ ಒಳ ಮೀಸಲಾತಿ ತರಲಿ ಎಂದರು.

ಕಾಂಗ್ರೆಸ್‌ನಲ್ಲಿ ಯಾವುದೇ ನಾಯಕರು ಯಾರದ್ದೇ ಮಾತು ಕೇಳುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಸೇರಿದಂತೆ ಎಲ್ಲ ನಾಯಕರು ಈ ಸಮಯದಲ್ಲೇ ಮಠ, ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುತ್ತಿದ್ದಾರೆ. ಎಲ್ಲರೂ ಸಿಎಂ ಆಗಲು ದೇವರ ಮೊರೆ ಹೋಗಿದ್ದಾರೆ. ಸತೀಶ್‌ ಜಾರಕಿಹೊಳಿ ಸ್ಮಶಾನಕ್ಕೂ ಹೋಗಿ ಪೂಜೆ ಮಾಡುತ್ತಾರೆ. ಹಿಂದೂ ಧರ್ಮದ ಮೇಲೆ ನಂಬಿಕೆಯೇ ಇಲ್ಲದ ಇವರೆಲ್ಲರೂ ಈಗಲೇ ಪೂಜೆ ಮಾಡಲಾರಂಭಿಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ಗೊತ್ತಾಗಿದೆ. ಇಂತಹ ಸಮಯದಲ್ಲಿ ಅಭಿವೃದ್ಧಿಯ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ಆಸ್ಪತ್ರೆಗೆ ಔಷಧಿ ಇಲ್ಲ, ಶಾಲೆಗಳ ಅಭಿವೃದ್ಧಿ ನಡೆಯುತ್ತಿಲ್ಲ, ನೀರಾವರಿ ಯೋಜನೆಗಳು ಜಾರಿಯಾಗುತ್ತಿಲ್ಲ. ಹಗರಣಗಳು ಬಿಟ್ಟರೆ ಇಲ್ಲಿ ಬೇರೇನೂ ಇಲ್ಲ. ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.