ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿವಾರು ಜನಗಣತಿ) ವರದಿಯು ರಾಜ್ಯ ಸರ್ಕಾರಕ್ಕೆ ಗುರುವಾರ ಅಧಿಕೃತವಾಗಿ ಸಲ್ಲಿಕೆಯಾಗಲಿದೆ.
ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು ₹158.47 ಕೋಟಿ ವೆಚ್ಚದಲ್ಲಿ ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ ನಡೆಸಿತ್ತು. ಆದರೆ, ಆಯೋಗದ ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ.
ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಲಿದೆ.