ಮನೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು: 100 ದಿನ ತಲುಪಿದ ಹೋರಾಟ-ರಸ್ತೆ ತಡೆ ಮೂಲಕ ಆಕ್ರೋಶ

ತಮಿಳುನಾಡಿಗೆ ಕಾವೇರಿ ನೀರು: 100 ದಿನ ತಲುಪಿದ ಹೋರಾಟ-ರಸ್ತೆ ತಡೆ ಮೂಲಕ ಆಕ್ರೋಶ

0

ಮಂಡ್ಯ:ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ನಗರದ ನಗರದ ಸರ್.ಎಂ.ವಿ. ಪ್ರತಿಮೆ ಎದುರು ನಡೆಸುತ್ತಿರುವ ಪ್ರತಿಭಟನೆಯು ಬುಧವಾರ ನೂರನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಗಾರರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.


ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ವಾಹನಗಳ ಸಂಚಾರವನ್ನು ತಡೆದ ಪ್ರತಿಭಟನಾಕಾರರು, ರಸ್ತೆಯಲ್ಲೇ ಕೆಲ ಹೊತ್ತು ಧರಣಿ ಕುಳಿತರು. ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ -ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಸರದಿ ಉಪವಾಸ 19ನೇ ದಿನ ಪೂರೈಸಿದ್ದು,
ಮೆಣಸಗೆರೆಯ ಅರ್ಚಕ ಶಿವಲಿಂಗಪ್ಪ, ಕನ್ನಡ ಸೇನೆ ಪಾಂಡವಪುರ ತಾಲೂಕು ಅಧ್ಯಕ್ಷ ದೇವು,ಕಲ್ಲಹಳ್ಳಿ ಶಂಕರೇಗೌಡ, ಆಜಾದ್ ನಗರದ ಫಯಾಜ್, ಪಣಕನಹಳ್ಳಿ ಶಿವರಾಮು ಉಪವಾಸ ನಿರತರಾಗಿದ್ದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ರೈತ,ದಲಿತ, ಪ್ರಗತಿಪರ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅತಿಥಿ ಉಪನ್ಯಾಸಕರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.
ಕಾವೇರಿ ನದಿ ನೀರು ರಕ್ಷಣೆಗಾಗಿ ಕಳೆದ ನೂರು ದಿನದಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಾ,ಈಗಲೂ ಸಹ ಕದ್ದು ಮುಚ್ಚಿ ನೀರು ಹರಿಸುತ್ತಿದೆ, ಅಷ್ಟೇ ಅಲ್ಲದೆ ವಿಧಾನಮಂಡಲದ ಅಧಿವೇಶನದಲ್ಲಿ ಕಾವೇರಿ ವಿವಾದ ಕುರಿತು ಚರ್ಚಿಸದೆ ಉದಾಸೀನತೆ ತೋರಿ ಕಾಲ ಹರಣ ಮಾಡುತ್ತಿದೆ ಎಂದು ಆಕ್ರೋಶಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವೆ ಜಲ ವಿವಾದ ಉಂಟಾದಾಗ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಮುಂದಾಗದ ಪ್ರಧಾನಿ ನರೇಂದ್ರ ಮೋದಿ, ಸಂಕಷ್ಟ ಸನ್ನಿವೇಶದಲ್ಲೂ ಹಠಮಾರಿತನದಿಂದ ನೀರು ಹರಿಸಿಕೊಳ್ಳುತ್ತಿರುವ ತಮಿಳುನಾಡು, ರಾಷ್ಟ್ರೀಯ ಜಲ ನೀತಿ ರೂಪಿಸದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಗಾರರು ಕಿಡಿಕಾರಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ ಚುನಾಯಿತ ಜನಪ್ರತಿನಿಧಿಗಳ ಮೇಲೆ ಮತದಾರರ ಋಣ ಇದೆ ಆದರೆ ಕಾವೇರಿ ವಿಚಾರದಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ,ಉದಾಸೀನತೆ ತೋರಿದ್ದಾರೆ, ಜ್ವಲಂತ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸದೆ ರಾಜ್ಯ ಸರ್ಕಾರ ಹೊಣೆಗಾರಿಕೆ ನಿರ್ವಹಿಸದೆ ಜಾಣತನ ಪ್ರದರ್ಶಿಸುತ್ತಿದೆ. ಕಾವೇರಿ ಹೋರಾಟಗಾರರ ಕಿವಿಗೆ ಹೂವು ಮೂಡಿಸಲು ಸಾಧ್ಯವಿಲ್ಲ,ಸದನದಲ್ಲಿ ಕಾವೇರಿ ವಿಚಾರ ಚರ್ಚಿಸದೆ ಇದೂವರೆಗೆ ಕಾಲಹರಣ ಮಾಡಿದ್ದು ಸಾಕು. ಇನ್ನು ಎರಡು ದಿನ ಕಾಲಾವಕಾಶವಿದ್ದು ಚರ್ಚಿಸಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ಕಾವೇರಿ ಹೋರಾಟ ಐತಿಹಾಸಿಕ ದಾಖಲೆ ಮಾಡಿದೆ, ಶತಮಾನದಲ್ಲಿಯೇ ನೂರು ದಿನ ಪೂರೈಸಿರುವ ಹೋರಾಟ ಇತಿಹಾಸದ ಪುಟ ಸೇರಿದೆ,ಇಂತಹ ಹೋರಾಟಕ್ಕೆ ಕೇಂದ್ರ ರಾಜ್ಯ ಸರ್ಕಾರದ ನಿರ್ಲಕ್ಷ್ಯತೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಪಕ್ಷಪಾತ ಕಾರಣ ಎಂದರು.
ಕಾವೇರಿ ಹೋರಾಟದ ಬಗ್ಗೆ ರಾಜ್ಯ ಸರ್ಕಾರ ತಿರಸ್ಕಾರ ಮನೋಭಾವ ಹೊಂದಿದೆ,ರೈತರು ಸರ್ಕಾರದ ವಿರುದ್ಧ ಹತಾಶರಾಗಿದ್ದಾರೆ,ಇದುವರೆಗೆ ಹೋರಾಟಗಾರರ ಮಾತುಕತೆಗೆ ಕರೆದಿಲ್ಲ,ಚರ್ಚೆ ಮಾಡಿಲ್ಲ ಇಂತಹ ಸರ್ಕಾರವನ್ನು ಹಿಂದೆ ನೋಡಿಲ್ಲ, ಬೇರೆ ಸರ್ಕಾರಗಳಿದ್ದರೆ ಎಷ್ಟೊತ್ತಿಗೆ ಮೂರು ನಾಲ್ಕು ಬಾರಿ ಮಾತುಕತೆ ಮಾಡುತ್ತಿದ್ದರೂ, ಸದನದಲ್ಲಿ ಚರ್ಚೆ ಮಾಡಿ ನಿಲುವು ಘೋಷಿಸಿಲ್ಲ ಎಂದರು.
ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಿ ಪಾಶ್ವತ ಪರಿಹಾರಕ್ಕೆ ಮುಂದಾಗಬೇಕು, ಸಂಕಷ್ಟ ಸನ್ನಿವೇಶದಲ್ಲಿ ನೀರು ಹಂಚಿಕೆಗೆ ಅನುಕೂಲವಾಗಲು ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬೋರಯ್ಯ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಸಾದೊಳಲು ಸ್ವಾಮಿ, ಕೀಲಾರ ಕೃಷ್ಣ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ,ಕನ್ನಡ ಸೇನೆ ಮಂಜುನಾಥ್, ಅಂಬುಜಮ್ಮ, ಸವಿತಾ, ಸೌಭಾಗ್ಯ, ಸುಜಾತ,ಸತ್ಯಾನಂದಸ್ವಾಮಿ, ತೂಬಿನಕೆರೆ ಲಿಂಗರಾಜು, ಮಹಾಂತಪ್ಪ, ಡಾ.ಎಸ್. ನಾರಾಯಣ್, ದಸಂಸ ಎಂ.ವಿ. ಕೃಷ್ಣ, ನಿವೃತ್ತ ಇಂಜಿನಿಯರ್ ಕೆಂಪೇಗೌಡ, ಹುರುಗಲವಾಡಿ ರಾಮಯ್ಯ ನೇತೃತ್ವ ವಹಿಸಿದ್ದರು.