ಮನೆ ಅಪರಾಧ ಮುಕ್ತ ವಿವಿ ಹಗರಣ ಸಿಬಿಐ ತನಿಖೆಗೆ ವಹಿಸಿ: ಗೋ.ಮಧುಸೂದನ್ ಆಗ್ರಹ

ಮುಕ್ತ ವಿವಿ ಹಗರಣ ಸಿಬಿಐ ತನಿಖೆಗೆ ವಹಿಸಿ: ಗೋ.ಮಧುಸೂದನ್ ಆಗ್ರಹ

0

ಮೈಸೂರು : ಪ್ರೊ.ಕೆ.ಎಸ್.ರಂಗಪ್ಪ ಅವರ ‘ಮುಕ್ತ ವಿವಿ ಹಗರಣ’ವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಬಿಐ ಮೇಲೆ ಪ್ರಭಾವ ಬೀರಲು ಯಾರಿಂದಲೂ ಸಾಧ್ಯವಿಲ್ಲ  ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ‌ ಕೆ.ಎಸ್.ರಂಗಪ್ಪರನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಹಗರಣಗಳ ಕುರಿತು ಎಸಿಬಿ ಮತ್ತು ಸಿಬಿಐ ತನಿಖೆಗೆ ಆದೇಶಿಸಿರುವ ರಾಜ್ಯಪಾಲರಿಗೆ ಅಭಿನಂದಿಸುತ್ತೇನೆ. ರಾಜ್ಯಪಾಲರ ಆದೇಶದ ಮೇರೆಗೆ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇದೀಗ ಹಗರಣದ ಕಾರಣಕರ್ತರಾದ ಪ್ರೊ.ಕೆ.ಎಸ್ ರಂಗಪ್ಪ, ಎಂ.ಜಿ ಕೃಷ್ಣನ್ ಮತ್ತು ಸಹಾಯಕರಾದ ಇತರ ಮುಕ್ತ ವಿವಿ ಅಧಿಕಾರಿಗಳ ಬಗ್ಗೆ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ ಎಂದರು.

ಪ್ರೊ.ಕೆ.ಎಸ್. ರಂಗಪ್ಪ ಮುಕ್ತ ವಿವಿಯ ಕುಲಪತಿಯಾಗಿದ್ದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಮುಕ್ತ ವಿವಿ ಹಗರಣವನ್ನು ದೇಶ- ವಿದೇಶಗಳಲ್ಲಿ ವಿಸ್ತರಿಸಿದ ಕೀರ್ತಿ ರಂಗಪ್ಪ ಅವರಿಗೆ ಸಲ್ಲುತ್ತದೆ. ರಂಗಪ್ಪ ಅವರ ಅವಧಿಯಲ್ಲಿ ದೇಶ-ವಿದೇಶಗಳಲ್ಲಿ ಕಾನೂನು ಬಾಹಿರವಾಗಿ ಆರಂಭಿಸಿದ ಶೈಕ್ಷಣಿಕ ಪಾಲುದಾರ ಸಂಸ್ಥೆಗಳ ಮೂಲಕ ಅನಧಿಕೃತವಾಗಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ.ನೇಪಾಳ, ಶ್ರೀಲಂಕಾ, ಅಮೆರಿಕಾ, ಯುಎಇ ಒಳಗೊಂಡಂತೆ ದೇಶದಾದ್ಯಂತ ಹರಡಿರುವ ಮೋಸಗಾರರ ಜಾಲದ ತನಿಖೆಯನ್ನು ನಡೆಸಲು ಸಿಬಿಐ ಮಾತ್ರವೇ ಸಮರ್ಥವಾಗಿದೆ ಎಂದು ತಿಳಿಸಿದರು.

ರಂಗಪ್ಪ ಒಬ್ಬ ಮೋಸಗಾರ. ವಿದ್ಯಾರ್ಥಿಗಳಿಗೆ ಟೋಪಿ ಹಾಕಿದ್ದಾರೆ. ಕೆಲವು ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆಯನ್ನೆ ನೀಡಿಲ್ಲ. ಎಲ್ಲಾ ವಿದ್ಯಾರ್ಥಿಗಳು ಬಾಯಿ ಬಡೆದುಕೊಳ್ಳುತ್ತಿದ್ದಾರೆ. ರಂಗಪ್ಪ ಅವರು ದೇವೇಗೌಡ-ಕುಮಾರಸ್ವಾಮಿ ಬೀಗರು. ಮತ್ತೆ ರಾಜಕೀಯ ಒತ್ತಡ ಬರಬಹುದು. ಈ ಹಿನ್ನೆಲೆಯಲ್ಲಿ ಹಗರಣ‌ದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.