ಚೆನ್ನೈ(Chennai): ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ದೆಹಲಿ, ಮುಂಬೈ, ಚೆನ್ನೈ, ಶಿವಗಂಗಾ ಸೇರಿದಂತೆ ದೇಶದ 7 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಪ್ರಕರಣವೊಂದರ ಸಂಬಂಧ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯು 2010–14ರ ನಡುವೆ ವಿದೇಶಕ್ಕೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ.
ಸಿಬಿಐ ದಾಳಿಯನ್ನು ಕಾರ್ತಿ ಚಿದಂಬರಂ ಕಚೇರಿ ಖಚಿತಪಡಿಸಿದೆ. ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ನನ್ನ ಮೇಲೆ ಎಷ್ಟು ಬಾರಿ ದಾಳಿ ನಡೆದಿದೆ ಎಂಬುದರ ಲೆಕ್ಕವೇ ಸಿಗುತ್ತಿಲ್ಲ. ಈ ಬಗ್ಗೆ ದಾಖಲಾತಿ ಇಡಬೇಕು ಎಂದಿದ್ದಾರೆ.