ಬೆಂಗಳೂರು: ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಅಕ್ರಮವಾಗಿ ವಾಸವಿರುವ ವಿದೇಶಿ ಪ್ರಜೆಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪಾಸ್ ಪೋರ್ಟ್ ಮತ್ತು ವೀಸಾ ಅವಧಿ ಮುಗಿದ್ದಿದ್ದರೂ ಕೆಲ ವಿದೇಶಿ ಪ್ರಜೆಗಳು ನಗರದಲ್ಲಿ ಅಕ್ರಮವಾಗಿ ವಾಸವಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಬಾಣಸವಾಡಿ, ಸುಬ್ಬಯ್ಯಪಾಳ್ಯ, ಶಿವಾಜಿನಗರ, ರಾಮಮೂರ್ತಿ ನಗರ ದಲ್ಲಿ ವಾಸವಿರುವ ನೈಜೀರಿಯಾ ಮತ್ತು ಆಫ್ರಿಕಾ ಪ್ರಜೆಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅವಧಿ ಮುಗಿದಿದ್ದ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರ್ಥಿ ವೀಸಾ ಪಡೆದು ನಗರಕ್ಕೆ ಆಗಮಿಸುವ ಕೆಲ ವಿದೇಶಿಯರು ತಮ್ಮ ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಗಳಿಗೆ ಹಿಂದಿರುಗದೆ ಅಕ್ರಮವಾಗಿ ನೆಲೆಸಿ ಮಾದಕವಸ್ತು ಮಾರಾಟ ಮತ್ತು ಇತರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.