ಇಂದೋರ್: ರಾಮನವಮಿ ಆಚರಣೆ ವೇಳೆ ಮೆಟ್ಟಿಲುಗಳ ಬಾವಿ ಮೇಲೆ ಹಾಸಿದ್ದ ಸಿಮೆಂಟ್ ಹಾಸು ಕುಸಿದು ಬಿದ್ದ ಪರಿಣಾಮ ಸುಮಾರು 25 ಭಕ್ತರು ಬಾವಿಯೊಳಗೆ ಬಿದ್ದ ಘಟನೆ ಮಧ್ಯಪ್ರದೇಶದ ಇಂದೋರ್ ನ ಶ್ರೀಬೇಲೆಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ನಡೆದಿದೆ.
ಬಾವಿಗೆ ಬಿದ್ದಿದ್ದ 25 ಮಂದಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದ್ದು, ಭಕ್ತರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಘಟನೆ ಕುರಿತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಮಾತನಾಡಿದ್ದು, ಮಾಹಿತಿ ಪಡೆದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.