ಬೆಂಗಳೂರು: ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಡಿ. 26 ಹಾಗೂ 27ರಂದು ಆಯೋಜಿಸಿರುವ ಕಾರ್ಯಕ್ರಮದ ಸಿದ್ಧತೆಯ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಮಹತ್ವದ ಸಭೆ ಆಯೋಜಿಸಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಿರುವ ಈ ಸಭೆಗೆ ಎಲ್ಲ ಸಚಿವರು, ಕಾಂಗ್ರೆಸ್ನ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಿಗೆ ಸಿಎಂ ಕಚೇರಿಯಿಂದ ಆಹ್ವಾನ ಕಳುಹಿಸಲಾಗಿದ್ದು, ಇದುವರೆಗೆ ನಡೆಸಿರುವ ಸಿದ್ಧತೆ ಹಾಗೂ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪರಾಮರ್ಶೆ ನಡೆಸಲಿದ್ದಾರೆ.
ಕಾರ್ಯಕ್ರಮದ ಯಶಸ್ಸಿಗಾಗಿ ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಕಳೆದೊಂದು ತಿಂಗಳಿಂದ ನಾನಾ ರೀತಿಯ ಸಭೆ ಹಾಗೂ ಸಿದ್ಧತೆ ನಡೆಸಲಾಗುತ್ತಿದೆ. ಸೈದ್ಧಾಂತಿಕವಾಗಿ ಇದು ಕಾಂಗ್ರೆಸ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಹೀಗಾಗಿ ಯಾವುದೇ ಕುಂದುಕೊರತೆಯಾಗದಂತೆ ಕಾರ್ಯಕ್ರಮ ನಡೆಸುವುದಕ್ಕಾಗಿ ಖುದ್ದು ಸಿಎಂ ಪರಿಶೀಲನೆ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ. ಈ ಮೂವರು ಬೆಳಗಾವಿಯಲ್ಲಿರುವ ವಿಟಿಯು ಅತಿಥಿ ಗೃಹದಲ್ಲಿ ವಾಸ್ತವ್ಯವಾಗಲಿದ್ದು, ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ದಿಲ್ಲಿಯಿಂದ 200ಕ್ಕೂ ಹೆಚ್ಚು ಕಾಂಗ್ರೆಸ್ ವಿಐಪಿ ಮುಖಂಡರು ಭಾಗಿಯಾಗಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಒಂದು ದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಮರು ದಿನ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಬೆಳಗಾವಿಗೆ ಲಕ್ಷಾಂತರ ಕಾರ್ಯಕರ್ತರು ಆಗಮಿಸುವ ಹಿನ್ನೆಲೆಯಲ್ಲಿ ಸರಕಾರ ವಿಶೇಷ ನಿಗಾ ವಹಿಸಿದೆ.














