ಶಿವಮೊಗ್ಗ(Shivamogga): ನ.22 ರಂದು ಎಲೆಚುಕ್ಕಿ ರೋಗದ ತಪಾಸಣೆಗೆ ಕೇಂದ್ರದ ತಂಡ ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕೇಂದ್ರದ ತಂಡ ಚಿಕ್ಕಮಗಳೂರು ಕೊಪ್ಪ ತಾಲೂಕಿನಿಂದ ತೀರ್ಥಹಳ್ಳಿ ತಾಲೂಕಿಗೆ ಪ್ರವೇಶ ಪಡೆದು ಅಗುಂಬೆ ಹೋಬಳಿಯಲ್ಲಿ ಎಲೆಚುಕ್ಕಿ ರೋಗದಿಂದ ಬಾಧಿತವಾದ ತೋಟಗಳಿಗೆ ಭೇಟಿ ನೀಡಿಲಿದ್ದಾರೆ ಎಂದರು.
ಅಂದು ತಂಡದ ಜೊತೆ ನಾನು ಹಾಗೂ ಡಿಸಿ ನೇತೃತ್ವದ ತಂಡ ಸಭೆ ನಡೆಸಲಿದ್ದೇವೆ ಎಂದರು.
ಈಗಾಗಲೇ ಸರ್ಕಾರ ಎಲೆಚುಕ್ಕಿ ರೋಗಕ್ಕೆ ಒಂದು ಬಾರಿ ಸರ್ಕಾರ ಉಚಿತ ಔಷಧ ನೀಡುತ್ತಿದ್ದು, ಇದನ್ನು ತೋಟಗಾರಿಕಾ ಇಲಾಖೆಯಿಂದ ಹಂಚುತ್ತಿದ್ದೇವೆ. ಮೊದಲ ಸಲ ಖಾಸಗಿಯಾಗಿ ಔಷಧ ಖರೀದಿ ಮಾಡುವ ಮುನ್ನ ತೋಟಗಾರಿಕಾ ಇಲಾಖೆಯವರನ್ನು ಭೇಟಿ ಮಾಡಬೇಕು ಎಂದು ಮಾಹಿತಿ ನೀಡಿದರು.
ಔಷಧದ ಕುರಿತು ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿಗೆ ಹಣ ಬಂದಿದೆ. ಯಾರು ಗಾಬರಿ ಆಗುವ ಅವಶ್ಯಕತೆ ಇಲ್ಲ. ಹಣಕ್ಕಿಂತ ರೋಗಕ್ಕೆ ಔಷಧ ಸಂಶೋಧನೆ ಮಾಡಬೇಕಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ ಪರಿಣಾಮ ತಂಡ ಆಗಮಿಸಿ ಎಲೆಚುಕ್ಕಿ ರೋಗದಿಂದ ನಾಶವಾದ ತೋಟದ ಮಾಲೀಕರಿಗೆ ಪರಿಹಾರ ನೀಡುವ ಕುರಿತು ನವೆಂಬರ್ 27 ರಂದು ಮುಖ್ಯಮಂತ್ರಿ ಅವರು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ. ಅವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.















