ನವದೆಹಲಿ : ಹಣ ಹೂಡಿಕೆ ಮಾಡಿ ಆಡುವ ಆನ್ಲೈನ್ ಗೇಮ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಮನಿ ಗೇಮಿಂಗ್ ಸಂಸ್ಥೆಯಾಗಿರುವ ಡ್ರೀಮ್11 ಬಿಸಿಸಿಐ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.
ಈ ಕುರಿತು ಡ್ರೀಮ್11 ಬಿಸಿಸಿಐಗೆ ಮಾಹಿತಿ ನೀಡಿದ್ದು, ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಸೆ.9ರಿಂದ ಆರಂಭವಾಗಲಿರುವ ಏಷ್ಯಾಕಪ್ಗೆ ಬೇರೆ ಹೊಸ ಪ್ರಾಯೋಜಕರ ಅವಶ್ಯತತೆಯಿದೆ.

18 ವರ್ಷಗಳ ಹಿಂದೆ ಆರಂಭವಾಗಿದ್ದ ಡ್ರೀಮ್11 ಸಂಸ್ಥೆ 2023ರ ಜುಲೈನಲ್ಲಿ ಬಿಸಿಸಿಐ ಪ್ರಾಯೋಜಕತ್ವವನ್ನು 3 ವರ್ಷದ ಅವಧಿಗೆ ಬರೋಬ್ಬರಿ 358 ಕೋಟಿ ರೂ.ಗೆ ಪಡೆದುಕೊಂಡಿತ್ತು. ಒಪ್ಪಂದದ ಅವಧಿ ಮುಂಬರುವ 2026ರ ಜುಲೈ ತಿಂಗಳವರೆಗೆ ಇದ್ದರೂ ಕೂಡ 1 ವರ್ಷಕ್ಕೂ ಮುಂಚೆ ಸಂಸ್ಥೆ ಪ್ರಾಯೋಜಕತ್ವವನ್ನು ತೊರೆದಿದೆ.
ಇದು ಕಾನೂನು ವಿಚಾರಕ್ಕೆ ಒಳಪಟ್ಟಿರುವುದರಿಂದ ಡ್ರೀಮ್11 ಸಂಸ್ಥೆ ಅವಧಿಗೂ ಮುನ್ನ ಪ್ರಾಯೋಜತ್ವವನ್ನು ತೊರೆದಿದ್ದರೂ ಕೂಡ ಬಿಸಿಸಿಐ ಯಾವುದೇ ದಂಡ ಪಾವತಿಸಿಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ಯಾವುದೇ ಸಂಸ್ಥೆಯು ಅವಧಿಗೆ ಮುನ್ನ ಪ್ರಾಯೋಜಕತ್ವ ತೊರೆದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.














