ಕಲಬುರ್ಗಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದ ಬಳಿಕ, ಕೇಂದ್ರ ಸರ್ಕಾರ ಈ ದುರಂತಕ್ಕೆ ನೇರ ಹೊಣೆವಹಿಸಬೇಕು ಹಾಗೂ ನಾಗರಿಕ ವಿಮಾನಯಾನ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ. ಗುರುವಾರ ಸಂಭವಿಸಿದ ಈ ಅಪಘಾತದಲ್ಲಿ 241 ಪ್ರಯಾಣಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡು, ಪೈಲಟ್, ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ 241 ಮಂದಿ ದುರ್ಮರಣಕ್ಕೆ ಒಳಗಾದ ಘಟನೆ ದೇಶಾದ್ಯಂತ ಆಘಾತ ಉಂಟುಮಾಡಿದೆ. ಈ ಹಿನ್ನಲೆಯಲ್ಲಿ ಕಲಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, “ಈ ಅಪಘಾತಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ವಿಮಾನಯಾನ ಸಚಿವರು ಇದರ ಹೊಣೆ ಹೊತ್ತುಕೊಳ್ಳಬೇಕು. ಈಗಲೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಘಟನೆ ಮತ್ತೆ ಮರುಕಳಿಸದಂತೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. “ನಿಷ್ಪಕ್ಷಪಾತ ತನಿಖೆ ನಡೆಸಿ ವರದಿಯನ್ನು ಜನತೆ ಮುಂದೆ ಇಡಬೇಕು. ನಾಗರಿಕ ವಿಮಾನಯಾನ ಇಲಾಖೆ ಮತ್ತು ಡಿಜಿಸಿಎ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎಷ್ಟು ವಿಫಲವಾಗಿದೆ ಎಂಬುದರ ಉತ್ತರ ನೀಡಬೇಕು” ಎಂದು ಖಂಡ್ರೆ ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಸಂದರ್ಭದಲ್ಲಿ ಬಿಜೆಪಿ ನಾಯಕರು ತಕ್ಷಣ ರಾಜ್ಯ ಸರ್ಕಾರದ ರಾಜೀನಾಮೆ ಕೇಳಿದ್ದರು. ಆದರೆ ಪಹಲ್ಗಾಮ್ ಅಥವಾ ಇತರ ಸ್ಥಳಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ತಮ್ಮ ನಾಯಕರು ರಾಜೀನಾಮೆ ನೀಡಿದ್ದರೇ ಎಂದು ಖಂಡ್ರೆ ಪ್ರಶ್ನಿಸಿದರು. “ಸಾವು, ನೋವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಆದರೆ ಬಿಜೆಪಿ ಇದನ್ನು ರಾಜಕೀಯ ಆಟಕ್ಕೆ ಪರಿವರ್ತಿಸುತ್ತಿದೆ” ಎಂದರು.
ಟಾಟಾ ಗ್ರೂಪ್ ಈ ಭೀಕರ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ₹1 ಕೋಟಿ ಪರಿಹಾರವನ್ನು ಘೋಷಿಸಿರುವ ಬಗ್ಗೆ ಈಶ್ವರ ಖಂಡ್ರೆ ಮೆಚ್ಚುಗೆ ವ್ಯಕ್ತಪಡಿಸಿ, “ಸರ್ಕಾರ ಈ ಕುಟುಂಬಗಳಿಗೆ ಏನು ನೀಡುತ್ತಿದೆ? ಯಾರ ಮೇಲಾದರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆಯೇ?” ಎಂಬ ಪ್ರಶ್ನೆ ಎತ್ತಿದರು.














