ಮನೆ ರಾಷ್ಟ್ರೀಯ ಗುಟ್ಕಾ-ಪಾನ್ ಮಸಾಲ ತಯಾರಕರಿಗೆ ಶಾಕ್‌ ಕೊಡಲು ಕೇಂದ್ರ ಸಜ್ಜು

ಗುಟ್ಕಾ-ಪಾನ್ ಮಸಾಲ ತಯಾರಕರಿಗೆ ಶಾಕ್‌ ಕೊಡಲು ಕೇಂದ್ರ ಸಜ್ಜು

0

ನವದೆಹಲಿ : ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಡಿ.19ರಂದು ಕೊನೆಗೊಳ್ಳಲಿದೆ. ಈ ಅಧಿವೇಶನದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮ ಗುರಿಯಾಗಿಸಿ ಹೊಸ ಕಠಿಣ ಕಾನೂನು ಪರಿಚಯಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದೇ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ʻಆರೋಗ್ಯ ಭದ್ರತೆಯಿಂದ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025ʼ ಮಸೂದೆಯನ್ನು ಮಂಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಮಸೂದೆಯ ಅನ್ವಯ ಗುಟ್ಕಾ, ಪಾನ್ ಮಸಾಲಾ ಹಾಗೂ ಇತರ ತಂಬಾಕು ಆಧರಿತ ಉತ್ಪನ್ನಗಳನ್ನು ಉತ್ಪಾದಿಸಲು ಬಳಸುವ ಯಂತ್ರೋಪಕರಣಗಳು ಮತ್ತು ಉತ್ಪಾದನಾ ಘಟಕಗಳ ಮೇಲೆ ವಿಶೇಷ ಸೆಸ್ ವಿಧಿಸಲಾಗುತ್ತದೆ. ಹೊಸ ಮಸೂದೆಯ ಅನ್ವಯ, ಕಾರ್ಖಾನೆಯು ಎಷ್ಟು ಉತ್ಪಾದಿಸುತ್ತದೆ ಎಂಬುದರ ಮೇಲೆ ಅಲ್ಲ, ಕಾರ್ಖಾನೆ ಯಂತ್ರಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ಸೆಸ್‌ ಲೆಕ್ಕಾಚಾರ ಮಾಡಲಾಗುತ್ತದೆ. ಇನ್ನೂ ಕೈಯಿಂದಲೇ ತಯಾರಿಸುವ ಉತ್ಪನ್ನಗಳಿಗೆ ಸ್ಥಿರ ಮಾಸಿಕ ಸೆಸ್‌ ವಿಧಿಸಬಹುದಾಗಿದೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ‌ ಪ್ರಕಾರ, ಕೇಂದ್ರ ಸರ್ಕಾರವು ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಹೊಸ ಆದಾಯ ಸಂಗ್ರಹಿಸುವ ಉದ್ದೇಶದಿಂದ ಈ ಮದೂಸೆಯನ್ನು ಪರಿಚಯಿಸಲು ಮುಂದಾಗಿದೆ ಎಂದು ಹೇಳಲಾಗ್ತಿದೆ. ಕೈಯಿಂದ ತಯಾರಿಸಿದ ಪಾನ್‌ ಮಸಾಲ ಮತ್ತು ಗುಟ್ಕಾ ಉತ್ಪನ್ನಗಳ ಮೇಲೆ ನಿಗದಿತ ಮಾಸಿಕ ಸೆಸ್‌ ಕಡ್ಡಾಯವಾಗಿರುತ್ತದೆ. ಹೊಸ ಮಸೂದೆಯು ಕಾನೂನಾಗಿ ರೂಪುಗೊಂಡ ನಂತರ, ಗುಟ್ಕಾ ಅಥವಾ ತಂಬಾಕು ಉತ್ಪನ್ನ ತಯಾರಕರು ತಮ್ಮ ಉತ್ಪಾದನೆಯಲ್ಲಿನ ಲಾಭ-ನಷ್ಟಗಳನ್ನು ಲೆಕ್ಕಿಸದೇ ಪ್ರತಿ ತಿಂಗಳು ಸೆಸ್ ಅನ್ನು ಠೇವಣಿ ಮಾಡಬೇಕಾಗುತ್ತದೆ. ಒಂದು ವೇಳೆ ಯಂತ್ರ ಅಥವಾ ಘಟಕವು 15 ದಿನಗಳಿಗಿಂತ ಹೆಚ್ಚು ಕಾಲ ಮುಚ್ಚಿದ್ರೆ ಆ ಒಂದು ಅವಧಿಗೆ ಮಾತ್ರ ವಿನಾಯ್ತಿ ನೀಡಲಾಗುತ್ತದೆ.

ಹೊಸ ಕಾನೂನು ಅಡಿಯಲ್ಲಿ, ಎಲ್ಲಾ ತಯಾರಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತೆ. ಜೊತೆಗೆ ಸಂಪೂರ್ಣ ಉತ್ಪಾದನೆ, ಸೆಸ್‌ ವಿವರಗಳೊಂದಿಗೆ ಮಾಸಿಕ ರಿಟರ್ನ್ಸ್‌ ಕೂಡ ಸಲ್ಲಿಸಬೇಕಾಗುತ್ತದೆ. ಜೊತೆಗೆ ಸರ್ಕಾರಿ ಅಧಿಕಾರಿಗಳು ಯಾವುದೇ ಸಮಯದಲ್ಲೂ ಕಾರ್ಖಾನೆಗಳ ಮೇಲೆ ರೇಡ್‌ ಮಾಡಲು ಅಥವಾ ಲೆಕ್ಕಪರಿಶೋಧಿಸಲು ಅವಕಾಶವಿರುತ್ತದೆ ಎಂದು ಹೇಳಲಾಗಿದೆ.

ಒಂದು ವೇಳೆ ಕಾನೂನು ನಿಯಮಗಳನ್ನ ಉಲ್ಲಂಘನೆ ಮಾಡಿದ್ರೆ, 5 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಭಾರೀ ದಂಡ ವಿಧಿಸಲಾಗುತ್ತದೆ. ಇದರೊಂದಿಗೆ ಅಗತ್ಯಬಿದ್ದರೆ, ಸರ್ಕಾರ ಪ್ರಸ್ತುತ ಸೆಸ್‌ ದರವನ್ನ ಹೆಚ್ಚಿಸುವ ಅಧಿಕಾರವನ್ನು ಹೊಂದಿದೆ. ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ಈ ಹೊಸ ಮಸೂದೆ ಕಾನೂನಾನಿ ಪರಿವರ್ತನೆಗೊಂಡರೆ, ಗುಡ್ಕಾ, ಪಾನ್‌ ಮಸಾಲ ಹಾಗೂ ತಂಬಾಕು ಉತ್ಪನ್ನಗಳ ತಯಾರಕರ ಮೇಲೆ ನೇರವಾಗಿ ಆರ್ಥಿಕ ಹೊರೆಯಾಗಲಿದೆ. ಇದರಿಂದ ತಯಾರಕರು ಉತ್ಪನ್ನಗಳ ಬೆಲೆ ಏರಿಕೆ ಮಾಡಲಿದ್ದು, ಅದುನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ ಎಂದು ಗುಟ್ಕಾ ಪ್ರಿಯರು ಕಿಡಿ ಕಾರಿದ್ದಾರೆ.