ಹೊಸದಿಲ್ಲಿ: ಫೆಂಗಲ್ ಚಂಡಮಾರುತ ತಮಿಳುನಾಡಿನಲ್ಲಿ ಸಾಕಷ್ಟು ಹಾನಿಯುಂಟು ಮಾಡಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಇದೀಗ ಫೆಂಗಲ್ ಚಂಡಮಾರುತದಿಂದ ಸಂತ್ರಸ್ತರಾಗಿರುವ ಜನರಿಗೆ ಪರಿಹಾರ ಒದಗಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಎರಡು ಕಂತುಗಳಲ್ಲಿ ತಮಿಳುನಾಡು ಸರ್ಕಾರಕ್ಕೆ 944.8 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವಾಲಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪ್ರಕೃತಿ ವಿಕೋಪದದಿಂದ ಪೀಡಿತವಾಗಿರುವ ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು ಅದರಂತೆ ನವೆಂಬರ್ 30 ರಂದು ಫೆಂಗಲ್ ಚಂಡಮಾರುತದಿಂದ ತುತ್ತಾದ ತಮಿಳುನಾಡಿಗೆ ಪರಿಹಾರ ನೆರವು ನೀಡುವಲ್ಲಿ ಎಸ್‌ಡಿಆರ್‌ಎಫ್‌ನಿಂದ ಕೇಂದ್ರ ಪಾಲು ಎರಡೂ ಕಂತುಗಳಾಗಿ ತಮಿಳುನಾಡು ಸರ್ಕಾರಕ್ಕೆ 944.8 ಕೋಟಿ ಬಿಡುಗಡೆ ಮಾಡಲು ಗೃಹ ಸಚಿವಾಲಯ (ಎಂಎಚ್‌ಎ) ಅನುಮೋದನೆ ನೀಡಿದೆ ಎಂದು ಹೇಳಿದೆ.
ಫೆಂಗಲ್ ಚಂಡಮಾರುತದಿಂದ ತಮಿಳುನಾಡು ಮತ್ತು ಪುದುಚೇರಿಗೆ ಉಂಟಾದ ಹಾನಿಯನ್ನು ಮೌಲ್ಯಮಾಪನ ಮಾಡಲು ಸಚಿವಾಲಯದ ಕೇಂದ್ರ ತಂಡವನ್ನು (IMCT) ಕಳುಹಿಸಿದೆ. ಮೌಲ್ಯಮಾಪನದ ವರದಿ ಪಡೆದ ಬಳಿಕ ವಿಪತ್ತು ಪೀಡಿತ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸಹಾಯವನ್ನು ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವರ್ಷದಲ್ಲಿ ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ 21,718.716 ಕೋಟಿಗೂ ಹೆಚ್ಚು ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದು. ಇದರಲ್ಲಿ ಎಸ್‌ಡಿಆರ್‌ಎಫ್‌ನಿಂದ 26 ರಾಜ್ಯಗಳಿಗೆ 14,878.40 ಕೋಟಿ ರೂ., ಎನ್‌ಡಿಆರ್‌ಎಫ್‌ನಿಂದ 18 ರಾಜ್ಯಗಳಿಗೆ 4,808.32 ಕೋಟಿ, ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ (ಎಸ್‌ಡಿಎಂಎಫ್) 1,385.45 ಕೋಟಿ 11 ರಾಜ್ಯಗಳಿಗೆ ಮತ್ತು 646.546 ರಾಷ್ಟ್ರೀಯ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್) ಏಳು ರಾಜ್ಯಗಳಿಗೆ ಬಿಡುಗಡೆ ಮಾಡಿದೆ ಎಂದು ಹೇಳಿದೆ.















