ಮೈಸೂರು: 2023-24ನೇ ಸಾಲಿನಲ್ಲಿ ಪ್ರತಿ ಯೂನಿಟ್’ಗೆ 1.46 ಹೆಚ್ಚಿಸುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ಪ್ರಸ್ತಾವವನ್ನು ಬಳಕೆದಾರರು ವಿರೋಧಿಸಿದರು. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದರು.
ಸೆಸ್ಕ್ ಅರ್ಜಿ ಹಿನ್ನೆಲೆಯಲ್ಲಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್’ಸಿ) ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಉದ್ಯಮಿಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ವಿದ್ಯುತ್ ದರ ಪರಿಷ್ಕರಣೆ ಬೇಡ ಎಂದು ವಾದ ಮಂಡಿಸಿದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಮಾತನಾಡಿ, 2021-22ನೇ ಸಾಲಿನ ಕಾರ್ಯಕ್ಷಮತೆ ವಿಮರ್ಶೆ ವರದಿ ಹಾಗೂ 2023-24ನೇ ಸಾಲಿನ ವಾರ್ಷಿಕ ಕಂದಾಯ ಅಗತ್ಯತೆ (ಎ.ಆರ್.ಆರ್), ಶುಲ್ಕಗಳಿಂದ ಬರಬಹುದಾದ ನಿರೀಕ್ಷಿತ ಆದಾಯ (ಇ.ಆರ್.ಸಿ) ಮತು ವಿದ್ಯುತ್ ದರ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಿದರು.
2023–24ನೇ ಸಾಲಿನಲ್ಲಿ ನಿವ್ವಳ ಸರಾಸರಿ ಕಂದಾಯ ಅಗತ್ಯವು ₹ 6,622.48 ಕೋಟಿ ಇದೆ. ಪ್ರಸ್ತುತ ವಿದ್ಯುತ್ ದರಗಳಿಂದ ₹ 5,572.74 ಕೋಟಿ ಸಂಗ್ರಹವಾಗುತ್ತದೆ. ಇದರಿಂದ, ಒಟ್ಟು ₹ 1,049.74 ಕೋಟಿ ಕಂದಾಯ ಕೊರತೆ ಆಗಲಿದೆ. ಇದನ್ನು ಭರಿಸಲು ಎಲ್ಲ ಜಕಾತಿಗಳನ್ನೂ ಒಳಗೊಂಡಂತೆ ಪ್ರತಿ ಯೂನಿಟ್’ಗೆ ಸರಾಸರಿ ₹ 1.46 (ನಿಗದಿತ ಶುಲ್ಕ ಒಳಗೊಂಡಂತೆ) ವಿದ್ಯುತ್ ದರ ಹೆಚ್ಚಿಸಬೇಕು ಎಂದು ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಹಾಗೂ ಸದಸ್ಯರಾದ ಎಚ್.ಎಂ.ಮಂಜುನಾಥ್ ಮತ್ತು ಎಂ.ಡಿ.ರವಿ ಅವರ ಎದುರು ಮನವಿ ಮಾಡಿದರು.
ಪರಿಷ್ಕರಣೆ ಸಂಬಂಧ ಒಟ್ಟು 10 ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಉತ್ತರ ಕೊಡಲಾಗಿದೆ ಎಂದು ಹೇಳಿದರು.
ಸೆಸ್ಕ್’ನಿಂದ ಕೈಗೊಂಡಿರುವ ಸುಧಾರಣಾ ಕ್ರಮಗಳು, ಗ್ರಾಹಕರಿಗೆ ನೀಡುತ್ತಿರುವ ಸ್ಪಂದನೆಯ ಕುರಿತು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಬಾಕಿ ವಸೂಲಾತಿಯಲ್ಲಿ ಸೆಸ್ಕ್ ವಿಫಲವಾಗಿದೆ. ವಸೂಲಿ ಮಾಡುತ್ತೇವೆ ಎಂದು ಪ್ರತಿ ಸಾರ್ವಜನಿಕ ವಿಚಾರಣೆಯಲ್ಲೂ ಹೇಳುತ್ತಾರೆ. ಅದಕ್ಕೊಂದು ಗಡುವು ಬೇಡವೇ? ಎಂದು ಕೇಳಿದರು.
ದರ ಏರಿಕೆಯನ್ನು ಯಾವುದೇ ಪರಿಗಣಿಸಬಾರದು ಎಂದು ಒತ್ತಾಯಿಸಿದರು.