ಮೈಸೂರು (Mysuru)-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯಲ್ಲಿ 155 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಗುರಿ ನೀಡಿದೆ. ಪೆಟ್ರೋಲ್ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಪರಿಸರ ಮಾಲಿನ್ಯ ತಡೆಗಟ್ಟಲು ವಿದ್ಯುತ್ ವಾಹನಗಳ ಬಳಕೆ ಹಾಗೂ ಚಾರ್ಜಿಂಗ್ ತಂತ್ರಜ್ಞಾನವನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಸ್ಕ್ ವ್ಯಾಪ್ತಿಯ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಮಡಿಕೇರಿಯಲ್ಲಿ 155 ಚಾರ್ಜಿಂಗ್ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ಈಗಾಗಲೇ ತಮ್ಮ ವ್ಯಾಪ್ತಿಯಲ್ಲಿ ನಾಲ್ಕು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1 ಯೂನಿಟ್‌ಗೆ 10ರಿಂದ 12 ರೂ.
ಒಂದು ಯೂನಿಟ್ ವಿದ್ಯುತ್ ಚಾರ್ಜಿಂಗ್‌ಗೆ ಕನಿಷ್ಠ 10ರಿಂದ 12 ರೂ. ನಿಗದಿಯಾಗಲಿದೆ. ಇದಕ್ಕಿಂತ ಕಡಿಮೆಯಾಗಲು ಸಾಧ್ಯವಿಲ್ಲ. ದೆಹಲಿಯಲ್ಲಿ ಒಂದು ಯೂನಿಟ್‌ಗೆ 14ರಿಂದ 16 ರೂ. ಇದೆ. ಆದರೆ, ಸೆಸ್ಕ್ ಪ್ರೋತ್ಸಾಹಕವಾಗಿ ಒಂದು ಯೂನಿಟ್ ವಿದ್ಯುತ್ ಅನ್ನು 5 ರೂ.ಗೆ ನೀಡಲಿದೆ. ಹಿಂದೆ ವಿದ್ಯುತ್ ಹಿತಮಿತವಾಗಿ ಬಳಸುವಂತೆ ಹೇಳಲಾಗುತ್ತಿತ್ತು. ಈಗ ಅತಿ ಹೆಚ್ಚು ಬಳಸುವಂತೆ ಗ್ರಾಹಕರಿಗೆ ತಿಳಿಸುತ್ತಿದ್ದೇವೆ. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಮುಂಬೈನಲ್ಲಿ ನಿತ್ಯ 8 ಗಂಟೆ ವಿದ್ಯುತ್ ಕಡಿತವಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಈವರೆಗೂ ವಿದ್ಯುತ್ ಕಡಿತ ಮಾಡಿಲ್ಲ ಎಂದರು.
ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಅಭಿಯಾನ!
ರಾಜ್ಯವ್ಯಾಪಿ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಅಭಿಯಾನ ಗುರುವಾರದಿಂದ (ಇಂದಿನಿಂದ) ಆರಂಭವಾಗಲಿದೆ. ವಿದ್ಯುತ್ ಅಪಘಾತ ತಪ್ಪಿಸುವುದು, ವಿಫಲತೆ ಕಡಿಮೆ ಮಾಡುವುದು ಹಾಗೂ 25 ವರ್ಷ ಮೇಲ್ಪಟ್ಟಿರುವ ಟ್ರಾನ್ಸ್‌ಫಾರ್ಮರ್ ಕ್ಷಮತೆಯನ್ನು ಪರಿಶೀಲಿಸಿ, ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.
ಮೈಸೂರಿನಲ್ಲಿ 239 ತಂಡಗಳು – 717 ಟ್ರಾನ್ಸ್‌ಫಾರ್ಮರ್, ಚಾಮರಾಜನಗರ 76 ತಂಡಗಳು – 228 ಟ್ರಾನ್ಸ್‌ಫಾರ್ಮರ್, ಕೊಡಗು 50 ತಂಡಗಳು – 150 ಟ್ರಾನ್ಸ್‌ಫಾರ್ಮರ್, ಮಂಡ್ಯ 169 ತಂಡಗಳು – 507 ಟ್ರಾನ್ಸ್‌ಫಾರ್ಮರ್, ಹಾಸನದಲ್ಲಿ 311 ತಂಡಗಳು- 933 ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಮಾಡಲಿವೆ. ಸೆಸ್ಕ್ ವ್ಯಾಪ್ತಿಯ 2535 ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಗೆ 10 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ನಿರ್ವಹಣೆ ಅಭಿಯಾನದಿಂದ ನಿತ್ಯ 2 ರಿಂದ 3 ಗಂಟೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಿದರು.
ಮೇ 7 ರಂದು ವಿಚಾರ ಸಂಕಿರಣದಲ್ಲಿ ಸುನೀಲ್ ಕುಮಾರ್ ಭಾಗಿ
ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗುವುದು. ಸವಾಲುಗಳು, ಪರಿಣಾಮಗಳು, ವಾಹನಗಳ ಸುರಕ್ಷತೆ ಹಾಗೂ ದರ ನಿಗದಿ ಸಂಬಂಧಿಸಿದಂತೆ ಚರ್ಚಿಸಲು ಮೇ 7ರಂದು ಕಡಕೊಳದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಇಂಧನ ಸಚಿವ ಸುನೀಲ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಜಯವಿಭವಸ್ವಾಮಿ ತಿಳಿಸಿದರು.