ಬೆಂಗಳೂರು(Bengaluru): ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ ರ್ಯಾಂಕಿಂಗ್’ನ ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ.
ಜುಲೈ 30ರಂದು ಹೊರಡಿಸಿದ್ದ ರ್ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್ಯಾಕಿಂಗ್ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಕಳೆದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇಕಡ 6 ಅಂಕಗಳನ್ನು ಕಡಿತಗೊಳಿಸಿದ ನಂತರ ಆ ವರ್ಷದ ಅಂಕಗಳ ಶೇಕಡ 50 ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇಕಡ 50 ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕಳೆದ ವರ್ಷದ 14 ವಿದ್ಯಾರ್ಥಿಗಳು ಮಾತ್ರ 500ರಿಂದ ಸಾವಿರ ರ್ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.
ಹಾಗೆಯೇ 501ರಿಂದ 10 ಸಾವಿರದ ರ್ಯಾಂಕಿಂಗ್ನಲ್ಲಿ ಕಳೆದ ವರ್ಷದ 2,063 ಅಭ್ಯರ್ಥಿಗಳು ಮತ್ತು 22,022 ಅಭ್ಯರ್ಥಿಗಳು 10,001ದಿಂದ 1 ಲಕ್ಷದವರೆಗಿನ ರ್ಯಾಂಕಿಂಗ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪತಿ ಕೋರ್ಸುಗಳಿಗೆ ಮಾತ್ರ ಅನ್ವಯವಾಗುತ್ತದೆ. ವೆಟರ್ನರಿ ಮತ್ತು ಫಾರ್ಮಸಿ ಕೋರ್ಸುಗಳಿಗೆ ಈ ಹಿಂದೆ ನೀಡಿರುವಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್ಯಾಂಕಿಂಗ್ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.