ಮನೆ ಅಪರಾಧ ಸಿಇಟಿ ಸೀಟ್‌ ಬ್ಲಾಕಿಂಗ್‌ ಹಗರಣ: ಕೆಇಎ ಅಧಿಕಾರಿ ಸೇರಿ 8 ಬಂಧನ

ಸಿಇಟಿ ಸೀಟ್‌ ಬ್ಲಾಕಿಂಗ್‌ ಹಗರಣ: ಕೆಇಎ ಅಧಿಕಾರಿ ಸೇರಿ 8 ಬಂಧನ

0

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಹು ಬೇಡಿಕೆಯ ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌ ಹಗರಣಕ್ಕೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ 8 ಮಂದಿ ಅಧಿಕಾರಿ ಮತ್ತು ಸಿಬಂದಿಯನ್ನು ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಕೆಲವರು ಕೆಇಎಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತರರು ಮಧ್ಯವರ್ತಿಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿ ಕೆಲಸ ಮಾಡುವವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನಿಖೆ ವೇಳೆ ಕೆಇಎಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಪರೀಕ್ಷಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿ, ಮಧ್ಯವರ್ತಿಗಳು ಹಾಗೂ ಖಾಸಗಿ ಕಾಲೇಜಿನವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾಗ ಸೀಟ್‌ ಬ್ಲಾಕಿಂಗ್‌ ಹಗರಣ ಬೆಳಕಿಗೆ ಬಂದಿದೆ.

ಅಂತಿಮ ಸುತ್ತಿನ ಆಯ್ಕೆ ಪ್ರಕ್ರಿಯೆಯ ಅನಂತರ ಉಳಿಕೆಯಾಗುವ ಸರಕಾರಿ ಕೋಟಾದ ಸೀಟುಗಳು ಕಾಲೇಜುಗಳ ಪಾಲಾಗುವುದರಿಂದ ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಈ ಸೀಟುಗಳನ್ನು ಹೆಚ್ಚಿನ ಶುಲ್ಕವನ್ನು ಕಟ್ಟಿಸಿಕೊಂಡು ಕಡಿಮೆ ರ್‍ಯಾಂಕ್‌ ಇರುವವರಿಗೆ ನೀಡುತ್ತಾರೆ. ಈ ಉದ್ದೇಶದಿಂದಲೇ ಕೆಲವು ಕಾಲೇಜಿನವರು ಸೀಟು ಅಗತ್ಯವಿಲ್ಲದ ಅಭ್ಯರ್ಥಿಗಳೊಂದಿಗೆ ಸೇರಿ ಕೊನೆಯ ಸುತ್ತಿನಲ್ಲಿ ಸೀಟು ಹಂಚಿಕೆ ಪಡೆದು ಕಾಲೇಜಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಒಂದೇ ಐಪಿ ವಿಳಾಸ ಬಳಸಿ ಸೀಟ್‌ ಬ್ಲಾಕಿಂಗ್‌ ಮಾಡಲಾಗುತ್ತಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಅಭ್ಯರ್ಥಿಗಳ ಲಾಗಿನ್‌ – ಪಾಸ್‌ವರ್ಡ್‌, ಸೀಕ್ರೆಟ್‌ ಕೀಯನ್ನು ಅನಧಿಕೃತವಾಗಿ ಪಡೆದುಕೊಂಡು ಅವರ ಪರವಾಗಿ ಆಪ್ಶನ್‌ ಎಂಟ್ರಿ ನಡೆಸಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು ಅರ್ಹ ಅಭ್ಯರ್ಥಿಗಳು ಸೀಟ್‌ ವಂಚಿತರಾಗುವಂತೆ ಮಾಡಲಾಗಿದೆ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನ. 13ರಂದು ಕೆಇಎ ಅಧಿಕಾರಿಗಳು ಸೀಟ್‌ ಬ್ಲಾಕ್‌ ಸಂಬಂಧ ಮಲ್ಲೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು, ಕಸಬಾ ಹೋಬಳಿ ಹಕ್ಕುಪೇಟೆ ವಿಲೇಜ್‌ನಲ್ಲಿರುವ ಆಕಾಶ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಮತ್ತು ಬೆಳ್ಳಂದೂರಿನ ನ್ಯೂ ಹಾರಿಜಾನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಎಂಬ 3 ಪ್ರತಿಷ್ಠಿತ ಕಾಲೇಜುಗಳ ಹೆಸರುಗಳನ್ನು ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ಕೆಇಎಯ ಹಿರಿಯ ಅಧಿಕಾರಿ ಇಸಾವುದ್ದೀನ್‌ ಜೆ. ಗಡಿಯಾಳ್‌ ದೂರಿನಲ್ಲಿ ಉಲ್ಲೇಖೀಸಿದ್ದರು.