ಮನೆ ಸುದ್ದಿ ಜಾಲ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ – ಖರ್ಗೆ ಜೊತೆ ಸಭೆ ನಡೆಸಿದ ರಾಗಾ

ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ – ಖರ್ಗೆ ಜೊತೆ ಸಭೆ ನಡೆಸಿದ ರಾಗಾ

0

ನವದೆಹಲಿ : ಕರ್ನಾಟಕ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತೀವ್ರಗೊಳ್ಳುತ್ತಿರುವ ಹೊತ್ತಲ್ಲೇ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಸಭೆ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸಕ್ಕೆ ಆಗಮಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖರ್ಗೆ ಅವರ ಜೊತೆಗೆ ಎರಡು ಗಂಟೆಗಳ ಸುದೀರ್ಘ ಸಭೆ ನಡೆಸಿದರು.

ಈ ಸಭೆಯಲ್ಲಿ ರಾಜ್ಯದ ಇಂದಿನ ಬ್ರೇಕ್ ಪಾಸ್ಟ್ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ ಈವರೆಗೂ ನಡೆದ ಬೆಳವಣಿಗೆ ಬಗ್ಗೆ ಖರ್ಗೆ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿದರು. ಮುಖ್ಯವಾಗಿ ಸಿಎಂ ಬದಲಾವಣೆ ಬಗ್ಗೆಯೂ ಚರ್ಚೆಗೆ ಆಗಿದ್ದು, ಸಾಧಕ-ಬಾಧಕಗಳ ಬಗ್ಗೆ ವಿಮರ್ಶೆ ನಡೆದಿದೆ ಎನ್ನಲಾಗಿದೆ.

ನಾಳೆ ಸಂಜೆ ಐದು ಗಂಟೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯ‌ ಗಾಂಧಿ ಜೊತೆಗೆ ಚರ್ಚೆ ಬಳಿಕ ಅಂತಿಮ ತೀರ್ಮಾನಕ್ಕೆ ಬರುವ ನಿರ್ಧಾರ ಮಾಡಲಾಗಿದೆ. ಹೀಗಾಗಿ, ನಾಳೆ ಸೋನಿಯ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆ ನಿರ್ಣಾಯಕವಾಗಿದ್ದು, ಮುಖ್ಯಮಂತ್ರಿ ಹುದ್ದೆಯ ಭವಿಷ್ಯ ನಿರ್ಣಯಿಸಲಿದೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಸೃಷ್ಟಿಯಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್‌ ಮಧ್ಯಪ್ರವೇಶಿಸಿದೆ. ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಪರಸ್ಪರ ಮಾತುಕತೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೈಕಮಾಂಡ್‌ ಸೂಚನೆ ನೀಡಿತ್ತು. ಅದರಂತೆ ಸಿಎಂ ಮತ್ತು ಡಿಸಿಎಂ ಇಂದು ಬೆಳಗ್ಗೆ ಉಪಾಹಾರ ಸಭೆ ನಡೆಸಿದರು. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಇಬ್ಬರೂ ತಿಳಿಸಿದ್ದಾರೆ.