ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಗಡಿ ನಾಡು ಚಾಮರಾಜನಗರದ ಶತಮಾನದ ಶಾಲೆ ಎಂಬ ಹೆಗ್ಗಳಿಕೆ ಪಡೆದಿರುವ ಈ ಮುಕ್ಕಡಹಳ್ಳಿಯ ದುಸ್ಥಿತಿ ಹೇಳತೀರದ್ದು.
ಅಂಗನವಾಡಿಯಿಂದ 7ನೇ ತರಗತಿ ವರೆಗೂ ಈ ಶಾಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲಾ ಕಟ್ಟಡದ ದುಸ್ಥಿತಿ ನೋಡಿ ಪೋಷಕರು ಈಗ ಈ ಶಾಲೆಗೆ ಮಕ್ಕಳನ್ನ ಕಳಿಸುವುದನ್ನ ನಿಲ್ಲಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಾಣುತ್ತಿದೆ. ಈ ಪರಿಸ್ಥಿತಿ ಹೀಗೆ ಮುಂದುವರೆದ್ರೆ ಶಾಲೆ ಮುಚ್ಚಲೇ ಬೇಕಾದ ಅನಿವಾರ್ಯತೆ ಎದುರಾಗಲಿದೆ.
ಈ ಶಾಲೆ ಇಗಲೋ ಆಗಲೋ ಅಂತ ಬೀಳುವ ಹಂತದಲ್ಲಿದೆ. ಅಲ್ಲದೆ ಮೇಲ್ಚಾವಣಿ ದೂಳು ಹಿಡಿದಿದೆ. ಕೂರಲು ಬೆಂಚುಗಳಿಲ್ಲದೆ ನೆಲದ ಮೇಲೆ ಕುಳಿತು ಶಾಲಾ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಇಲ್ಲಿನ ಶೌಚಾಲಯಕ್ಕೆ ಬಾಗಿಲು ಸಹ ಇಲ್ಲ.
ಇನ್ನು ಮುಕ್ಕಡಹಳ್ಳಿಯಲ್ಲಿ ಅತಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ರೈತರಿದ್ದಾರೆ. ಇವರು ಲಕ್ಷಗಟ್ಟಲೇ ಡೊನೇಷನ್ ಕೊಟ್ಟು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಪರಿಸ್ಥಿತಿಯಲ್ಲಿಲ್ಲ. ಇವರೆಲ್ಲ ನೆಚ್ಚಿ ಕೊಂಡಿರುವುದು ಸರ್ಕಾರಿ ಶಾಲೆಯನ್ನೇ. ಇಂತ ಸರ್ಕಾರಿ ಶಾಲೆಯ ಪರಿಸ್ಥಿತಿ ಹೀಗೆ ಆದ್ರೆ ನೂರಾರು ಮಕ್ಕಳು ಶಾಲೆಯಿಂದ ವಂಚಿತರಾಗಲಿದ್ದಾರೆ. ಶಿಕ್ಷಣದಿಂದ ದೂರ ಉಳಿಯುವಂತಾಗುತ್ತೆ. ಇನ್ನು ಕಟ್ಟಡ ದುರಸ್ಥಿ ಕಾರ್ಯ ನಡೆಸಲು ಶಿಕ್ಷಣ ಇಲಾಖೆಯಲ್ಲಿ ಹಣದ ಸಮಸ್ಯೆಯಿದೆ ಜೊತೆಗೆ ಶಿಕ್ಷಕರ ಕೊರತೆ ಇರುವ ಕಾರಣ ದಿನ ಕಳೆದಂತೆ ಶಾಲೆಯಿಂದ ಮಕ್ಕಳು ದೂರವಾಗುತ್ತಿರುವುದು ಈಗ ಆತಂಕ ಸೃಷ್ಠಿಸುತ್ತಿದೆ.