ಚಾಮರಾಜನಗರ: ಜಿಲ್ಲೆಯ ವಿದ್ಯಾರ್ಥಿಗಳ ಬಹುಕಾಲದ ಕನಸು ಈಡೇರಿದ ದಿವಸವಿದು. ಚಾಮರಾಜನಗರದಲ್ಲಿ ಅತಿ ಶೀಘ್ರದಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭವಾಗಲಿದ್ದು, ಇದಕ್ಕಾಗಿ ಭಾರತೀಯ ವಕೀಲರ ಪರಿಷತ್ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಕಾನೂನು ಪದವಿ ವ್ಯಾಸಂಗಕ್ಕೆ ದೂರದ ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಿಗೆ ಹೋಗಬೇಕಿದ್ದ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಕಾನೂನು ಪದವಿ ವ್ಯಾಸಂಗ ಮಾಡುವ ಅವಕಾಶ ದೊರೆತಂತಾಗಿದೆ.
1997 ರಲ್ಲಿ ಪ್ರತ್ಯೇಕ ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಿದ್ದರೂ ಕಾನೂನು ಶಿಕ್ಷಣದ ಸಾಧ್ಯತೆ ಇಲ್ಲದ ಸ್ಥಿತಿ ಇತ್ತು. ಖಾಸಗಿ ಕಾಲೇಜುಗಳ ದುಬಾರಿ ಶುಲ್ಕವನ್ನು ಭರಿಸಲು ಅನೇಕ ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿರಲಿಲ್ಲ.ಈ ಹಿನ್ನೆಲೆಯಲ್ಲಿ, ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಹರಸಾಹಸದ ಪ್ರಯತ್ನದಿಂದ ಜಿಲ್ಲೆಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿತ್ತು.
ಅಂದಿನಿಂದ ಈಗವರೆಗೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಕಾನೂನು ಕಾಲೇಜು ಆರಂಭ ವಿಳಂಬವಾಗಿತ್ತು. ಆದರೆ ಪ್ರಸ್ತುತ ಪ್ರಾಂಶುಪಾಲರಾದ ಲಲಿತಾಬಾಯಿ ಅವರ ನಿರಂತರ ಪ್ರಯತ್ನದಿಂದ, ವಕೀಲರ ಪರಿಷತ್‌ನಲ್ಲಿ ಅನುಮತಿ ಪಡೆಯುವಲ್ಲಿ ಯಶಸ್ಸು ಸಿಕ್ಕಿದೆ. ಇದನ್ನು ಅನುಸರಿಸಿ ರಾಜ್ಯ ಸರ್ಕಾರ ಈಗಾಗಲೇ ಐವರು ಬೋಧಕರು, ಬೋಧಕೇತರ ಸಿಬ್ಬಂದಿ ನೇಮಕ ಮಾಡಿದೆ.
ಚಾಮರಾಜನಗರದ ಶಾಸಕ ಮತ್ತು ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ ಅವರು, ತಮ್ಮ ಸಿಎಸ್ಆರ್ ನಿಧಿಯಿಂದ ಕಾನೂನು ಕಾಲೇಜಿಗೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಿದ್ದು, ಶಿಕ್ಷಣ ಮೂಲಸೌಕರ್ಯದಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ.
ಪ್ರಾರಂಭವಾಗುವ ಮೂರು ವರ್ಷದ ಎಲ್‌ಎಲ್‌ಬಿ ಪದವಿ ಕೋರ್ಸ್‌ಗಾಗಿ ಪ್ರಥಮ ವರ್ಷದ ಸರ್ಕಾರಿ ಶುಲ್ಕ ಕೇವಲ ₹5,500 ಮಾತ್ರವಾಗಿದ್ದು, ಇದು ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪ್ರಸ್ತುತ ನಡೆಯುತ್ತಿರುವ ಪದವಿ ಪರೀಕ್ಷೆಗಳ ನಂತರ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಅದಾದ ಬಳಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.















