ಮನೆ ಸುದ್ದಿ ಜಾಲ ಗೃಹಲಕ್ಷ್ಮಿ ಅನುಷ್ಠಾನ ರಾಜ್ಯದಲ್ಲೇ ಚಾಮರಾಜನಗರ ಫಸ್ಟ್: ಶಾಸಕ ಎ.ಆರ್. ಕೃಷ್ಣಮೂರ್ತಿ

ಗೃಹಲಕ್ಷ್ಮಿ ಅನುಷ್ಠಾನ ರಾಜ್ಯದಲ್ಲೇ ಚಾಮರಾಜನಗರ ಫಸ್ಟ್: ಶಾಸಕ ಎ.ಆರ್. ಕೃಷ್ಣಮೂರ್ತಿ

0
Oplus_0

ಯಳಂದೂರು: ಚಾಮರಾಜನಗರ ಜಿಲ್ಲೆ ಇಡೀ ರಾಜ್ಯದಲ್ಲೇ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಶೇ. ೯೯.೯೭ ರಷ್ಟು ಪ್ರಗತಿ ಸಾಧಿಸುವ ಮೂಲಕ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಅವರು ಮಂಗಳವಾರ ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ೨೨೫೫೦ ಮಂದಿ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳತ್ತಿದ್ದಾರೆ.

ಇದರೊಂದಿಗೆ ಶಕ್ತಿ ಯೋಜನೆಯಡಿಯಲ್ಲಿ ೧೦ ಕೋಟಿ ಜನರು ಓಡಾಡಿದ್ದಾರೆ. ಜಿಲ್ಲೆಯ ವಿವಿಧ ಡಿಪೋಗಳಿಗೆ ೫೦ ಕೋಟಿ ರೂ. ಹೆಚ್ಚಿನ ಆದಾಯ ಬಂದಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ೮೭೦೯ ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲಾಗಿದೆ. ೩.೮೧ ಕೋಟಿ ರೂ. ಯುವನಿಧಿಗೆ ಖರ್ಚು ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ ನಮ್ಮ ಸರ್ಕಾರ ೫ ಗ್ಯಾರಂಟಿ ಯೋಜನೆಗಳಿಗೆ ೫೧ ಸಾವಿರ ಕೋಟಿ ರೂ. ಹಣವನ್ನು ಖರ್ಚು ಮಾಡಿದೆ. ಜಿಲ್ಲೆಗೆ ಈ ವರ್ಷ ೧೩೫೦ ಕೋಟಿ ರೂ. ಹಣ ವ್ಯಯವಾಗಿದೆ. ಸಮೀಕ್ಷೆಗಳ ಪ್ರಕಾರ ಈ ಎಲ್ಲಾ ಯೋಜನೆಗಳ ಫಲವಾಗಿ ರಾಜ್ಯದ ತಲಾದಾಯದಲ್ಲಿ ಏರಿಕೆಯಾಗಿದ್ದು ನಮ್ಮ ರಾಜ್ಯ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಜನರು ಗ್ಯಾರಂಟಿಯಿಂದ ಇಂದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

ಇದರೊಂದಿಗೆ ಎಲ್ಲಾ ಹಣ ಗ್ಯಾರಂಟಿ ಯೋಜನೆಗೆ ಖರ್ಚಾಗುತ್ತಿದೆ ಎಂದು ವಿರೋಧ ಪಕ್ಷಗಳ ಬೊಬ್ಬೆ ಇಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದೆ. ಆರೋಗ್ಯ, ನೀರಾವರಿ, ಉದ್ಯೋಗ ಸೃಷ್ಟಿ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಸಾಧಿಸಿದೆ. ನನ್ನ ಕ್ಷೇತ್ರದ ಕಾಲುವೆ ಅಭಿವೃದ್ಧಿಗೆ ಒಟ್ಟು ೧೨೦ ಕೋಟಿ ರೂ. ಯಳಂದೂರಿನಲ್ಲಿ ತಾಲೂಕು ಆಸ್ಪತ್ರೆ ನೂತನ ಕಟ್ಟಡಕ್ಕೆ ೩೫ ಕೋಟಿ ರೂ. ಕೊಳ್ಳೇಗಾಲದಲ್ಲಿ ಮತ್ತೊಂದು ಜಿಲ್ಲಾಮಟ್ಟದ ಸೌಲಭ್ಯವುಳ್ಳ ಆಸ್ಪತ್ರೆಗೆ ೯೫ ಕೋಟಿ ರೂ. ಶಾಸಕರ ಅನುದಾನದಲ್ಲಿ ಸಮುದಾಯ ಭನವಗಳಿಗೆ ೨೫ ಕೋಟಿ ರೂ. ಪಿಎಂಜಿಎಸ್‌ವೈ, ನಬಾರ್ಡ್, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ ಬಾರಿ ಶಾಸಕರಿಗೆ ೫೦ ಕೋಟಿ ರೂ. ವಿಶೇಷ ಅನುದಾನ ನೀಡಲಾಗುತ್ತಿದ್ದು ಇದಕ್ಕೆ ಈಗಾಗಲೇ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಗಳ ಸೂಚನೆ ನೀಡಿದ್ದಾರೆ. ಹಾಗಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅನುದಾನಗಳ ಕೊರತೆ ಇಲ್ಲ ಇವೆಲ್ಲಾ ವಿರೋಧ ಪಕ್ಷಗಳ ಸುಳ್ಳು ಸುದ್ಧಿಯಾಗಿದೆ ಎಂದರು.


ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಕೃಷ್ಣಾಪುರ ದೇವರಾಜು ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್ ಸದಸ್ಯರಾದ ಪ್ರಭುಶಂಕರ್, ನಾಗಣ್ಣ, ಅಸ್ಲಂಪಾಷ, ವಿರೂಪಾಕ್ಷ ಗ್ರಾಪಂ ಅಧ್ಯಕ್ಷ ನವೀನ್ ಉಪಾಧ್ಯಕ್ಷ ಮಹದೇವಮ್ಮ ಇಒ ಉಮೇಶ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಂದಹಳ್ಳಿ ನಂಜುಂಡಸ್ವಾಮಿ ಪಿಡಿಒ ಕಾವ್ಯ, ಕಾರ್ಯದರ್ಶಿ ಪುಟ್ಟರಾಜು ಸೇರಿದಂತೆ ಅನೇಕರು ಇದ್ದರು.