ಚಾಮರಾಜನಗರ: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪ ಆಲದಕೆರೆ ಕಾಡಿನಲ್ಲಿ ಭಾನುವಾರ ಸಂಜೆ ನಡೆದಿದೆ.
ಪಿ.ಜಿ. ಪಾಳ್ಯ ಸಮೀಪದ ಮಾಳಿಗನತ್ತ ಗ್ರಾಮದ ಪ್ರಭುಸ್ವಾಮಿ (55) ಮೃತರು.
ಮಲೆಮಹದೇಶ್ವರ ವನ್ಯಜೀವಿಧಾಮ ಪಿ.ಜಿ. ಪಾಳ್ಯ ಅರಣ್ಯ ವಲಯಕ್ಕೆ ಸೇರಿದ ಆಲದಕೆರೆ ಬಯಲು ಅರಣ್ಯ ಪ್ರದೇಶಕ್ಕೆ ಪ್ರಭುಸ್ವಾಮಿ ಹಾಗೂ ಮಗ ಚಂದ್ರು ಇಬ್ಬರೂ ಪೊರಕೆ ಕಡ್ಡಿ ಕೀಳಲು ತೆರಳಿದ್ದರು. ಅಪ್ಪ ಒಂದು ಭಾಗದಲ್ಲಿ ಮಗ ಮತ್ತೊಂದು ಭಾಗದಲ್ಲಿ ಕಡ್ಡಿ ಕೀಳುತ್ತಿದ್ದಾಗ ಆನೆ ದಾಳಿ ಮಾಡಿದೆ. ಪ್ರಭುಸ್ವಾಮಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.














