ಚಾಮರಾಜನಗರ(Chamarajanagar): ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ (ಬಿಆರ್‌ಟಿ) ಹಲ್ಲಿಯ ಹೊಸ ಪ್ರಭೇದ ಪತ್ತೆಯಾಗಿದ್ದು, ಇದು ಕುಬ್ಜ ಹಲ್ಲಿ ಎಂದು ಗುರುತಿಸಲಾಗಿದೆ.
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್‌ಮೆಂಟ್ (ಏಟ್ರೀ) ಸಂಶೋಧಕ ಡಾ.ಅರವಿಂದ್ ಎನ್.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಅವರು ಹಲ್ಲಿಯ ಹೊಸ ಪ್ರಬೇಧವನ್ನು ಪತ್ತೆ ಮಾಡಿದ್ದಾರೆ.
ಹಲ್ಲಿಯು 2.57 ಸೆಂ.ಮೀನಷ್ಟು (25.7 ಮಿ.ಮೀ) ಉದ್ದವಿದೆ. ಗಂಡು ಹಲ್ಲಿಯ ದೇಹ ಕಂದು ಬಣ್ಣ ಹಾಗೂ ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯ ಪೂರ್ತಿ ದೇಹ ಕಂದು ಬಣ್ಣದಿಂದ ಕೂಡಿದೆ.
ಅಧ್ಯಯನ ವರದಿಯು ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ಜರ್ಮನಿಯ ನಿಯತಕಾಲಿಕ ವರ್ಟೆಬ್ರೆಟ್ ಝೂಲಾಜಿಯಲ್ಲಿ ಪ್ರಕಟಗೊಂಡಿದೆ.
2021ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬಿಳಿಗಿರಿ ರಂಗನಬೆಟ್ಟ, ಕೆ.ಗುಡಿ ವ್ಯಾಪ್ತಿಯಲ್ಲಿ ಹಲ್ಲಿಯ ಬಗ್ಗೆ ಇಬ್ಬರೂ ಮಾಹಿತಿ ಸಂಗ್ರಹಿಸಿದ್ದರು. ಹಲ್ಲಿಯ ದೇಹ ರಚನೆ ಹಾಗೂ ಡಿಎನ್‌ಎ ಪರೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ, ಇದು ಹಲ್ಲಿಯ ಪ್ರತ್ಯೇಕ ಪ್ರಭೇದ ಎಂಬುದನ್ನು ನಿರೂಪಿಸಿದ್ದಾರೆ.
ವಿಜ್ಞಾನಿ ಉಮಾಶಂಕರ್ ಹೆಸರು
ಹೊಸ ಹಲ್ಲಿ ಪ್ರಬೇಧಕ್ಕೆ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಏಟ್ರೀ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಉಮಾಶಂಕರ್ ಅವರ ಹೆಸರನ್ನು ಸೇರಿಸಿ ‘ಉಮಾಶಂಕರ್ ಕುಬ್ಜ ಹಲ್ಲಿ’ (umashankar’s dwarf gecko) ಎಂದು ಹೆಸರಿಡಲಾಗಿದೆ.