ಚಾಮರಾಜನಗರ(Chamarajangara): ಜಿಂಕೆ ಬೇಟೆಯಾಡಿ ಮಾಂಸ ಹೊತ್ತುಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಮದ್ದೂರು ಕಾಲೋನಿಯ ಷಣ್ಮುಖ(35) ಬಂಧಿತ ಆರೋಪಿ. ಉಳಿದ ನಾಲ್ಕು ಮಂದಿ ಪರಾರಿಯಾಗಿದ್ದಾರೆ.
ಘಟನೆ ವಿವರ: ಬಂಡೀಪುರದ ಮದ್ದೂರು ವಲಯದ ನೇರಳೆ ಮರದ ಅರಣ್ಯ ಪ್ರದೇಶದಲ್ಲಿ ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್, ಅರಣ್ಯ ರಕ್ಷಕ ನವೀನ ಹಾಗೂ ಸಿಬ್ಬಂದಿ ಅರಣ್ಯ ಗಸ್ತು ಕಾರ್ಯ ನಡೆಸುತ್ತಿದ್ದ ವೇಳೆ ಐದು ಮಂದಿ ಜಿಂಕೆ ಮಾಂಸ ಹೊತ್ತುಕೊಂಡು ಬರುತ್ತಿದ್ದರು. ಆ ಸಂದರ್ಭ ದಾಳಿ ನಡೆಸಿ ಓರ್ವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಆತನಿಂದ ಜಿಂಕೆ ಮಾಂಸ ಹಾಗೂ ಅದಕ್ಕೆ ಬಳಕೆ ಮಾಡಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಡೀಪುರ ಹುಲಿಯೋಜನೆ ನಿರ್ದೇಶಕ ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಮದ್ದೂರು ವಲಯದ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ನೇತೃತ್ವದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಅರಣ್ಯ ಇಲಾಖಾ ಪಶು ವೈದ್ಯ ಡಾ. ವಾಸೀಂ ಮಿರ್ಜಾ ಅವರಿಂದ ಮೃತ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.