ಚಾಮರಾಜನಗರ: ನಗರದ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರಂದು ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗದೆ ಮೃತಪಟ್ಟ 32 ಮಂದಿಯ ಕುಟುಂಬದ ಸದಸ್ಯರಿಗೆ ಫೆ.1ರಿಂದ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಘೋಷಿಸಿದರು.
ಗಣರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆ.1ರಿಂದ ಅವರು ಜಿಲ್ಲೆಯಲ್ಲಿ ಕೆಲಸ ಮಾಡಬಹುದು. ಸಂತ್ರಸ್ತರ ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬೇಕು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದರು.
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಸಂತ್ರಸ್ತರ ಕುಟುಂಬದವರು ಸಚಿವರನ್ನು ಭೇಟಿ ಮಾಡಿ, ‘ಸರ್ಕಾರವು ಕೊಟ್ಟ ಮಾತಿನಂತೆ ಇನ್ನೂ ಸರ್ಕಾರಿ ಕೆಲಸ ನೀಡಿಲ್ಲ. ತಕ್ಷಣ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ಸಚಿವ ವೆಂಕಟೇಶ್, ಮೃತಪಟ್ಟ 32 ಕುಟುಂಬಗಳ ಸದಸ್ಯರಿಗೆ ಕಾಯಂ ಸರ್ಕಾರಿ ಉದ್ಯೋಗ ನೀಡಲು ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ್ದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು, ವಾರದಲ್ಲಿ ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಹೇಳಿದ್ದರು.