ಮೈಸೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಚಾಮರಾಜನಗರ ಜಿಲ್ಲಾ ಕೇಂದ್ರ. ಹಿಂದೆ ಈ ಊರಿಗೆ ಇದ್ದ ಹೆಸರು ಅರಿಕೊಟಾರ. ಮೈಸೂರು ಅರಸು ಮುಮ್ಮಡಿ ಕೃಷ್ಣರಾಜ ಒಡೆಯರ ತಂದೆ ಚಾಮರಾಜ ಒಡೆಯರ್ ಹುಟ್ಟಿದ್ದು ಇದೇ ಊರಿನಲ್ಲಿ, ಹೀಗಾಗಿ 1818ರಲ್ಲಿ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು.
ಒಡೆಯರು 1826ರಲ್ಲಿ ಇಲ್ಲಿ ಸುಂದರವಾದ ಚಾಮರಾಜೇಶ್ವರ ದೇವಾಲಯ ಕಟ್ಟಿಸಿದರು. ನಂಜನಗೂಡಿನಂತೆಯೇ ಸುಂದರವಾದ ಗೋಪುರವನ್ನು ಹೊಂದಿರುವ ಈ ದೇವಾಲಯದ ಹೊರ ನೋಟ ಮನಮೋಹಕವಾಗಿದೆ. ಪಂಚಕಳಶ ಹಾಗೂ ಎರಡು ಕೋಡಿನಾಕಾರದ ವಿನ್ಯಾಸವುಳ್ಳ ಗೋಪುರ ವಿಜಯನಗರ ಶೈಲಿಯಲ್ಲಿದೆ. ನಾಲ್ಕಂತಸ್ತಿನ ಗೋಪುರದಲ್ಲಿರುವ ಗಾರೆಯ ಕಿರು ಗೋಪುರಗಳು ಸುಂದರವಾಗಿವೆ. ಮಧ್ಯಭಾಗದ ಗೂಡಿನಲ್ಲಿ ಶಿವಪಾರ್ವತಿಯರ ಗಾರೆ ವಿಗ್ರಹವಿದೆ.
ಗೋಪುರದ ಕೆಳಗಿರುವ ಪ್ರವೇಶದ್ವಾರದ ಒಳಹೊಕ್ಕರೆ ಮಂಟಪದಲ್ಲಿನ ಬೃಹತ್ ನಂದಿ ಸ್ವಾಗತಿಸುತ್ತದೆ.
ನಂದಿಯ ಎದುರು ದೇವಾಲಯದ ಪ್ರವೇಶದ್ವಾರವಿದೆ. ಚಾಮರಾಜೇಶ್ವರ ದೇವಸ್ಥಾನದೊಳಗೆ ಮೂರು ಗುಡಿಗಳಿವೆ. ಮಧ್ಯದಲ್ಲಿರುವ ಗರ್ಭಗೃಹದಲ್ಲಿ ಸುಂದರವಾದ ಶಿವಲಿಂಗವಿದೆ ಇದುವೇ ಚಾಮರಾಜೇಶ್ವರ. ಎಡಗಡೆಯ ಗುಡಿಯಲ್ಲಿ ಕೆಂಪ ನಂಜಮಾಂಬಾ ವಿಗ್ರಹವಿದ್ದರೆ ಬಲಗಡೆಯದರಲ್ಲಿ ಒಡೆಯರ ಅಧಿದೇವತೆ ಚಾಮುಂಡೇಶ್ವರಿಯ ವಿಗ್ರಹವಿದೆ.
ನವರಂಗದ ಎಡಬಲಗಳಲ್ಲಿ ಆರು ಲಿಂಗಗಳಿವೆ. ನವರಂಗದ್ವಾರದ ಒಳಪಕ್ಕಗಳಲ್ಲಿ ಜಗತ್ತಿನ ಕಣ್ಣುಗಳಾದ ಸೂರ್ಯಚಂದ್ರ ವಿಗ್ರಹಗಳಿವೆ. ವಿಶಾಲವಾದ ಪ್ರಾಕಾರದೊಳಗೆ ಸುತ್ತಲೂ ಹಲವು ಲಿಂಗಗಳೂ ವಿಗ್ರಹಗಳೂ ಇವೆ. ದೇವಾಲಯದಲ್ಲಿರುವ ಶಿವನ ಲೀಲಾಮೂರ್ತಿಗಳು ಸುಂದರವಾಗಿವೆ.
ಚಾಮರಾಜ ಒಡೆಯರು ಹುಟ್ಟಿದ ಸ್ಥಳದಲ್ಲಿ ಜನನ ಮಂಟಪ ನಿರ್ಮಿಸಲಾಗಿದೆ. ಮಂಟಪದ ಮೇಲಿನ ಚಿತ್ರಗಳು ಆಕರ್ಷಕವಾಗಿವೆ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in