ಮೈಸೂರು(Mysuru): ಇಂದು ತಾಯಿ ಚಾಮುಂಡೇಶ್ವರಿ ವರ್ಧಂತಿ ಆಚರಣೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವ ಜರುಗಿತು.
ಪಲ್ಲಕ್ಕಿಯಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಪ್ರತಿಷ್ಟಾಪಿಸಿದ ಬಳಿಕ ಉತ್ಸವ ಮೂರ್ತಿಗೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.
ಬಳಿಕ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಪೂಜೆ ಸಲ್ಲಿಸಿದರು. ತಾಯಿ ಚಾಮುಂಡೇಶ್ವರಿ ಕೇಸರಿ ಬಣ್ಣದ ರೇಷ್ಮೆ ವಸ್ತ್ರದಲ್ಲಿ ಕಂಗೊಳಿಸುತ್ತಿದ್ದು, ಉತ್ಸವ ಮೂರ್ತಿಗೆ ದೇವಸ್ಥಾನದ ಪ್ರಾಂಗಣದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಯಿತು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶ್ವೇತ ವರ್ಣದ ಪೋಷಾಕು ಹಸಿರು ಬಣ್ಣದ ಪೇಟದಲ್ಲಿ ಕಂಗೊಳಿಸುತ್ತಿದ್ದರು.