ಗುಂಡ್ಲುಪೇಟೆ(ಚಾಮರಾಜನಗರ): ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮೊಟ್ಟ ಮೊದಲ ಬಾರಿಗೆ ತಾಲೂಕಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಸಿ.ಎಸ್.ನಿರಂಜನಕುಮಾರ್ ಪರ ಭರ್ಜರಿ ರೋಡ್ ಶೋ ನಡೆಸಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಮಧ್ಯಾಹ 1 ಗಂಟೆ ಸುಮಾರಿಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ ಮಡಹಳ್ಳಿ ಸರ್ಕಲ್ ವರೆಗೆ ವಾಹನದಲ್ಲಿ ಬಂದು ನಂತರ ಪ್ರಚಾರ ರಥವೇರಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ-766ರ ಮಡಹಳ್ಳಿ ವೃತ್ತದಿಂದ ಆರಂಭವಾದ ರೋಡ್ ಶೋ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಅಂಚೆ ಕಚೇರಿ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಮೂಲಕ ಸಾಗಿ ಹಳೇ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡು ನಂತರ ಮುಕ್ತಾಯ ಗೊಂಡಿತು.
ಸಾವಿರಾರು ಮಂದಿ ಭಾಗಿ
ಗುಂಡ್ಲುಪೇಟೆ ಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ಹಿನ್ನಲೆ ಉರಿ ಬಿಸಿಲನ್ನು ಲೆಕ್ಕಿಸದೆ ಸುಮಾರು 10ರಿಂದ 12 ಸಾವಿರ ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಹೆದ್ದಾರಿಯುದ್ದಕ್ಕೂ ಬಿಜೆಪಿ ಬಾವುಟ ಹಾಗೂ ಶಾಸಕ ನಿರಂಜನಕುಮಾರ್ ಹಾಗೂ ಅಮಿತ್ ಶಾ ಫೋಟೋ ರಾರಾಜಿಸಿದ್ದವು. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಶಾಸಕ ನಿರಂಜನಕುಮಾರ್ ಪರ ಘೋಷಣೆಗಳು ಮೊಳಗಿಸಿದರು.
ರೋಡ್ ಶೋದಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಸಿ.ಎಸ್.ನಿರಂಜನಕುಮಾರ್, ಕಾಡಾ ಅಧ್ಯಕ್ಷ ನಿಜಗುಣರಾಜು, ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಸೇರಿದಂತೆ ಬಿಜೆಪಿ ಪ್ರಮುಖರು ಭಾಗವಹಿಸಿದ್ದರು.
ನಿರಂಜನ್ ಕುಮಾರ್ ರನ್ನು ಬಹುಮತದಿಂದ ಗೆಲ್ಲಿಸಿ
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿನ್ನು ಮತ್ತೇ ಜಾರಿ ಮಾಡುತ್ತೇವೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಯಾವ ಜಾತಿಯ ಮೀಸಲಾತಿ ಕಿತ್ತುಕೊಳ್ಳುತ್ತಾರೋ?. ಲಿಂಗಾಯತರದ್ದೋ, ಒಕ್ಕಲಿಗರದ್ದೋ ಇಲ್ಲವೇ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಮರಿಗೆ ಕೊಡುತ್ತಾರೋ ಎಂದು ಕಿಡಿಕಾರಿದರು.
ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಲಿದೆ. ಗುಂಡ್ಲುಪೇಟೆ ಅಭ್ಯರ್ಥಿ ನಿರಂಜನಕುಮಾರ್ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.