ಬೆಂಗಳೂರು: ಕೇಂದ್ರ ಸಂಪುಟದಲ್ಲಿ ರಾಜ್ಯದ ಐವರಿಗೆ ಅವಕಾಶ ದೊರೆತಿದ್ದು, ಅವರೆಲ್ಲರೂ ರಾಜ್ಯದ ಅನೇಕ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಿಂದ ಸಚಿವರಾಗಿರುವ ಎಲ್ಲರಿಗೂ ಅಭಿನಂದನೆಗಳು. ರಾಜ್ಯಕ್ಕೆ ಜಿಎಸ್‌ಟಿ ಬಾಕಿ ಬರಬೇಕಿದೆ. ಹಲವು ನೀರಾವರಿ ಯೋಜನೆಗಳಿಗೆ ಅನುಮತಿ ಸಿಗಬೇಕಿದೆ. ನೂತನ ಸಚಿವರು ಇವುಗಳಿಗೆ ಆದ್ಯತೆ ಕೊಡಬೇಕಿದೆ ಎಂದರು.
ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಕುಮಾರಸ್ವಾಮಿ ಸಹಿತ ಎಲ್ಲ ಸಚಿವರು ರಾಜ್ಯದ ಹಿತಾಸಕ್ತಿ ಕಾಪಾಡಲಿ. ಒಂದು ವೇಳೆ ವಿಫಲರಾದರೆ ಅವರಿಗೂ, ಅವರ ಪಕ್ಷಕ್ಕೂ ನಷ್ಟ. ನಾವು ಕಾದು ನೋಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚುವರಿಯಾಗಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದರೆ ಈ ಬಗ್ಗೆ ತೀರ್ಮಾನಿಸದು. ಸರಿ ಇಲ್ಲ ಎಂದರೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಸೂಚ್ಯವಾಗಿ ಹೇಳಿದರು..
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ಯಾವೊಬ್ಬ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಸದರಿಗೆ ಅವಕಾಶ ನೀಡಿಲ್ಲ. ರಾಜ್ಯದಿಂದ ಈ ಸಮುದಾಯಗಳಿಂದ ಸಂಸದರೂ ಆಯ್ಕೆಯಾಗಿದ್ದರೂ ಅವಕಾಶ ನೀಡಿಲ್ಲ. ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಈ ಎರಡು ಸಮುದಾಯಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಪರಮೇಶ್ವರ್ ಹೇಳಿದರು.