ಹುಬ್ಬಳ್ಳಿ (Hubballi): ಭೀಕರವಾಗಿ ಹತ್ಯೆಗೀಡಾದ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಅಂತ್ಯಸಂಸ್ಕಾರ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ನೇರವೇರಿದೆ.
ವೀರಶೈವ ಲಿಂಗಾಯತ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದೆ. ಚಂದ್ರಶೇಖರ ಗುರೂಜಿ ಅವರ ಸಹೋದರನ ಹಿರಿಯ ಮಗ ಸಂತೋಷ್ ಈ ವೇಳೆ ಅಂತಿಮ ವಿಧಿ ವಿಧಾನವನ್ನು ನಡೆಸಿದರು. 10 ಸ್ವಾಮೀಜಿಗಳು ಅಂತ್ಯ ಕ್ರಿಯೆಯನ್ನು ನಡೆಸಿಕೊಟ್ಟರು.
ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು. ನೂರಾರು ಉದ್ಯೋಗಿಗಳು ಕಣ್ಣೀರಿಟ್ಟರು. ಗುರೂಜಿಯ ಅಂತ್ಯ ಕ್ರಿಯೆಯಲ್ಲಿ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್, ನಿಡುಮಾಮಿಡಿ ಶ್ರೀಗಳು ಭಾಗಿಯಾಗಿದ್ದರು.
ಪಂಚಾಕ್ಷರಿ ಮಂತ್ರ, ಮಂಗಳಾರತಿ ಬಳಿಕ ಮೃತ ದೇಹದ ಹಣೆಗೆ ವಿಭೂತಿ ಧಾರಣೆ ಮಾಡಿ ಅವರ ಪಾದದ ಮೇಲೆ ಸ್ವಾಮೀಜಿಗಳು ಪಾದ ಇಟ್ಟು ಪೂಜೆ ನಡೆಸಿದರು. ಅಷ್ಟ ದಿಕ್ಕುಗಳಲ್ಲಿ ಮಹಾಂತ್ರ ಬರೆದು ಇಡಲಾಯಿತು. ಕೊನೆಯಲ್ಲಿ ಪುಷ್ಪಾರ್ಚನೆ ಅಂತ್ಯ ಕ್ರಿಯೆಯ ವಿಧಿ ವಿಧಾನ ಮುಗಿಸಲಾಯಿತು. ಇದಕ್ಕೂ ಮುನ್ನ ಸಮಾಧಿ ಸ್ಥಳದಲ್ಲಿ ಗುರೂಜಿ ಅವರ ಅಕ್ಕ ಕಣ್ಣೀರಿಡುತ್ತಲೇ ಮೂರ್ಛೆ ಹೋದ ಘಟನೆಯೂ ನಡೆಯಿತು.
ಅಂತ್ಯ ಕ್ರಿಯೆಯ ವೇಳೆ ಚಂದ್ರಶೇಖರ್ ಗುರೂಜಿ ಅವರು ಸಾಕಿದ್ದ ನಾಯಿ ಎಲ್ಲರ ಗಮನ ಸೆಳೆಯಿತು. ಮೃತ ದೇಹವನ್ನು ವೀಕ್ಷಿಸಿದ ನಾಯಿ, ಸಾಕಷ್ಟು ಸಮಯದವರೆಗೆ ಸಮಾಧಿ ಸ್ಥಳದಲ್ಲಿಯೇ ಕುಳಿತುಕೊಂಡಿತ್ತು.
ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಅಂತಿಮ ದರ್ಶನವನ್ನು ಹುಬ್ಬಳ್ಳಿ ನಗರದ ಹೊರ ವಲಯದ ಸುಳ್ಳ ರಸ್ತೆಯ ಅವರ ಜಮೀನಿನಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ನೂರಾರು ಜನರು ಬಂದು ಗುರೂಜಿಯವರ ಅಂತಿಮ ದರ್ಶನ ಪಡೆದರು. ಈ ವೇಳೆ ವೀರಶೈವ ವಿಧಿ ವಿಧಾನವಾಗಿ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯಿತು. ಮೂರು ಸಾವಿರ ಮಠದ ಆರು ಸ್ವಾಮೀಜಿಗಳು ಪೂಜೆ ಸಲ್ಲಿಕೆ ಮಾಡಿದರು.
ಗುರೂಜಿಯವರ ಮೃತ ದೇಹ ಜಮೀನಿನ ಹತ್ತಿರ ಬರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತು. ಚಂದ್ರಶೇಖರ ಗುರೂಜಿ ಅವರ ಅಂತಿಮ ದರ್ಶನಕ್ಕೆ ಬಂದ ಜನರ ಕಣ್ಣೀರು ಹಾಕಿದರು.