ರಾಮನಗರ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ರಾಮನಗರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಹೇಳಿದರು.
ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ.
ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ರಾಮನಗರ ಮಾಧ್ಯಮದವರು ಪ್ರೋತ್ಸಾಹ ಕೊಟ್ಟಿದ್ದಾರೆ. ರಾಜಕೀಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಉಪಚುನಾವಣೆ ನಡೆದಾಗ ಜಿಲ್ಲೆ ಹಾಗೂ ರಾಜ್ಯದ ನಾಯಕರು ನನ್ನನ್ನು ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಡಿಕೆ ಶಿವಕುಮಾರ್ ಅವರಿಗೆ ಒತ್ತಡ ತಂದು ನಾಯಕರು ನನಗೆ ಅವಕಾಶ ಕೊಟ್ಟಿದ್ದರು. ಹತ್ತು ವರ್ಷ ಎಂಟು ತಿಂಗಳುಗಳ ಕಾಲ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಅವಕಾಶಕ್ಕೆ ತಕ್ಕಂತೆ ಬಡವರು, ದೀನ ದಲಿತರು, ಮಹಿಳೆಯರ ಅಭಿವೃದ್ಧಿಗೆ ನನ್ನ ಗಮನಕ್ಕೆ ಬಂದಿದನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರ ಆಗಲೀ, ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪುವ ಹಾಗೆ ಹಗಲಿರುಳು ಶ್ರಮಿಸಿದ್ದೇನೆ ಎಂದು ಸುರೇಶ್ ಹೇಳಿದರು.
ನಾನು ಸಂಸದನಾಗಿದ್ದಾಗ ಎಂಟು ತಿಂಗಳು ಕಾಲ ಯುಪಿಎ ಸರ್ಕಾರ ಇತ್ತು. ಆಗ ನನಗೆ ಕೆಲಸ ಮಾಡಲಾಗಿದ್ದು ಕೇವಲ 5 ತಿಂಗಳು ಮಾತ್ರ. ತದನಂತರ ಎನ್ಡಿಎ ಸರ್ಕಾರ ಬಂತು. ಎರಡು ಬಾರಿಯೂ ಸಂಸತ್ ಸದಸ್ಯನಾಗಿ ಸದನದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ರಾಮನಗರ ಅಭಿವೃದ್ಧಿಗೆ ಕೆಲಸ ಮಾಡಿದ ಆತ್ಮತೃಪ್ತಿ ಸಂತೋಷ ನನಗಿದೆ. ನಾನು ಚುನಾವಣೆಗೆ 4 ಬಾರಿ ನಿಂತಾಗ, ಕನ್ನಡಿಗರ ತೆರಿಗೆ ಬಗ್ಗೆ ಧ್ವನಿ ಎತ್ತಿ ಇಡೀ ರಾಷ್ಟ್ರದಲ್ಲಿ ಟೀಕೆ ಎದುರಿಸಿದ್ದೇನೆ. ನಮಗೆ ಕರ್ನಾಟಕದ ಪಾಲು ಸಿಗಬೇಕು ಎಂಬುದು ಬಹಳ ಪ್ರಮುಖ ವಿಚಾರ. ಇದಕ್ಕಾಗಿ ವೈಯಕ್ತಿಕವಾಗಿ ಯಾವತ್ತೂ ಧ್ವನಿ ಎತ್ತೋದಕ್ಕೆ ಸಿದ್ಧನಾಗಿದ್ದೇನೆ. ನಾನು ಮತ ಕೇಳುವ ಸಂದರ್ಭದಲ್ಲಿ ಬೇರೆಯವರ ಹೆಸರಿನಲ್ಲಿ ಮತ ಕೇಳಲಿಲ್ಲ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಅಂತ ಕೇಳಿದ್ದೇನೆ. ಜನ ಸಾರಸಗಟಾಗಿ ಅದನ್ನು ತಿರಸ್ಕಾರ ಮಾಡಿದ್ದಾರೆ. ಆ ಸೋಲನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡುತ್ತೇನೆ. ಇನ್ನು ಮುಂದೆ ಡಿಕೆ ಶಿವಕುಮಾರ್ ಹಾಗೂ ಸಿದ್ದಮಯ್ಯ ನೇತೃತ್ವದಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಕೊಟ್ಟ ಮಾತಿಂದ ಹಿಂದೆ ಸರಿಯುವ ಮಾತಿಲ್ಲ. ನಾನು ಹೊಸದಾಗಿ ಬಂದಾಗ ಜನ ಕೆಲಸ ಮಾಡ್ತಾರೆ ಅಂತ ಗೆಲ್ಲಿಸಿದ್ರು. ಡಾಕ್ಟರ್ ಬಂದಾಗ ಡಾಕ್ಟರ್ ಅವರನ್ನೂ ಗೆಲ್ಲಿಸಿದ್ದಾರೆ. ಅವರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದೇನೆ. ಮಾಧ್ಯಮಗಳು ನನ್ನನ್ನು ಹೇಗೆ ಬಿಂಬಿಸಿದವು, ಅವರನ್ನು ಹೇಗೆ ಬಿಂಬಿಸಿದವು ಎಂಬುದು ಗೊತ್ತಿದೆ. ಹೀಗಾಗಿ ಮಾಧ್ಯಮಗಳಿಗೂ ಅಭಿನಂದನೆ ಅರ್ಪಿಸುತ್ತೇನೆ ಎಂದರು.
ಡಿಕೆ ಸುರೇಶ್ನ ಸೋಲಿಸಬಿಟ್ಟಿದ್ದೇವೆ. ಏನೋ ಆಗಿಬಿಡುತ್ತದೆ ಅನ್ನೋದಾದ್ರೆ ಅದು ಭ್ರಮೆ. ನಾನು ನನ್ನ ಕಾರ್ಯಕರ್ತರ ಜೊತೆಗಿದ್ದೇನೆ. ಯಾರಿಗೂ ನಾನು ವೈಯಕ್ತಿಕವಾಗಿ ತೊಂದರೆ ಕೊಟ್ಟವನಲ್ಲ. ಈ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಮಾತನಾಡಿರಬಹುದು ವಿನಃ ಯಾರನ್ನೂ ಕೆಟ್ಟದಾಗಿ ನಡೆಸಿಕೊಂಡಿಲ್ಲ. ನನ್ನ ನಡೆಯಿಂದ ಯಾರಿಗಾದರೂ ಮನಸ್ಸಿಗೆ ನೊವಾಗಿದ್ದರೆ, ಪಕ್ಷದ ಕಾರ್ಯಕರ್ತರ ಪರವಾಗಿ, ನನ್ನ ಪರವಾಗಿ ಕ್ಷಮೆ ಕೇಳುತ್ತೇನೆ. ನನಗೆ ಯಾರೂ ಹಿತಶತ್ರುಗಳಿಲ್ಲ ನನಗೆ ನಾನೇ ಶತ್ರು. ನಾನೂ ಒಂದು ವಿರಾಮ ನಿರೀಕ್ಷೆ ಮಾಡಿದ್ದೆ. ಈಗ ವಿರಾಮ. ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳು ಅಸೂಯೆ ನನ್ನ ಸೋಲಿಗೆ ಕಾರಣ ಎಂದು ಸುರೇಶ್ ಹೇಳಿದರು.