ರಾಮನಗರ: ತಮ್ಮ ಆರೋಗ್ಯ ಹಾಗೂ ನಿಖಿಲ್ ಅವರ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ಕಟುಕರಿಗೆ ಕಣ್ಣೀರು ಬರುವುದಿಲ್ಲ, ಹೃದಯವಿರುವ ಭಾವುಕ ಜೀವಿಗಳಿಗೆ ಮಾತ್ರ ಕಣ್ಣೀರು ಬರುತ್ತದೆ ಎಂದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ವಿರೂಪಾಕ್ಷಪುರ, ಕೋಡಂಬಹಳ್ಳಿ ಗ್ರಾಮಗಳಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು; ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಆಂಬುಲೆನ್ಸ್ ನಲ್ಲಿ ಬಂದಿಲ್ಲ
ನನ್ನ ಆರೋಗ್ಯ ಚೆನ್ನಾಗಿದೆ. ನಾನು ಆಂಬುಲೆನ್ಸ್ ನಲ್ಲಿ ಬಂದಿಲ್ಲ, ವ್ಹೀಲ್ ಚೇರ್ ಮೇಲೆ ಬಂದಿಲ್ಲ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ. ಅದನ್ನು ತೋರಿಸಲು ಇಲ್ಲಿಗೆ ಬಂದಿದ್ದೇನೆ. ನೀವೇ ನನ್ನನ್ನು ನೋಡುತ್ತಿದ್ದೀರಿ, ಹೇಗೆ ಇದ್ದೇನೆ ಎಂದು ಗಮನಿಸುತ್ತಿದ್ದೀರಿ ಅಲ್ಲವೇ? ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಕಾಂಗ್ರೆಸ್ ನಾಯಕರು ನನ್ನ ಹೊರಗಿನವರು ಎನ್ನುತ್ತಿದ್ದಾರೆ. ನಾನು ಅವರಿಗೆ ಹೊರಗಿನವನು ಎಂದು ಈಗ ಅನ್ನಿಸುತ್ತಿದೆ. ಆದರೆ, ನಾನು ಈ ತಾಲ್ಲೂಕಿಗೆ ಶಾಶ್ವತ ನೀರಾವರಿ ಒದಗಿಸಲು ಇಗ್ಗಳೂರು ಬ್ಯಾರೇಜ್ ಕಟ್ಟಿಸಿದಾಗ ಹಾಗೆಂದು ಅನಿಸಲಿಲ್ಲವೇ? ರಾಜಕೀಯಕ್ಕಾಗಿ ಕಾಂಗ್ರೆಸ್ ನಾಯಕರು ಜನರಿಗೆ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಮಂಡಿ ನೋವು, ನಿಂತುಕೊಂಡು ಮಾತಾಡೋಕೆ ಆಗಲ್ಲ. ನನಗೀಗ 92 ವರ್ಷ, ಎಸ್.ಎಂ.ಕೃಷ್ಣ ಮತ್ತು ನಾನು ಒಂದೇ ವಯಸ್ಸಿನವರು. ಆದರೆ ನಾವು ಈಗಲೂ ಕೆಲಸ ಮಾಡುತ್ತಿದ್ದೇವೆ. ದೇಹಕ್ಕೆ ವಯಸ್ಸಾಗುತ್ತದೆ, ಇಚ್ಛಾಶಕ್ತಿಗೆ ಅಲ್ಲ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಮುದ್ದೆ ಸೊಪ್ಪಿನ ಸಾಂಬಾರು ಹಾಕಿ ಅಡುಗೆ ಮಾಡಿ ಬಡಿಸಿದ ತಾಯಂದಿರು ಇಲ್ಲಿದ್ದೀರಿ. ನಿಮ್ಮನ್ನು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ನಿಮ್ಮ ಪಾದಕ್ಕೆ ನಾನು ನಮಸ್ಕಾರ ಮಾಡ್ತೀನಿ. ನಾನು ಈ ತಾಲೂಕಿಗೆ ಏನೇನು ಮಾಡಿದ್ದೇನೆ, ಹೇಗೆಲ್ಲಾ ಶ್ರಮಪಟ್ಟು ಇಗ್ಗಲೂರು ಅಣೆಕಟ್ಟು ಕಟ್ಟಿದ್ದೇನೆ, ಆ ಬಗ್ಗೆ ನಾನು ಚರ್ಚೆ ಮಾಡಲ್ಲ, ಆದರೆ ಇಗ್ಗಲೂರು ಅಣೆಕಟ್ಟು ನಿಮ್ಮ ಮುಂದೆ ಇದೆ ಎಂದರು ಅವರು.
ನಿಮ್ಮ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ
ನನಗೆ ನಿಮ್ಮ ಆಶೀರ್ವಾದ ಇದೆ. ನಾನು ಶತಾಯು ಆಗುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಬದುಕಿರುತ್ತೇನೆ ಎನ್ನುವ ಭರವಸೆ ಹೊಂದಿದ್ದೇನೆ. ದೇವರ, ನಿಮ್ಮೆಲ್ಲರ ಆಶೀರ್ವಾದ ಇದ್ದರೆ ನೂರು ವರ್ಷ ಬದುಕುತ್ತೇನೆ. ಆದರೆ, ಕಾಂಗ್ರೆಸ್ ನಾಯಕರಿಗೆ ನನ್ನ ಆರೋಗ್ಯದ ಬಗ್ಗೆಯೇ ಚಿಂತೆಯಾಗಿದೆ ಎಂದು ಮಾಜಿ ಪ್ರಧಾನಿಗಳು ಅತೀವ ನೋವು ವ್ಯಕ್ತಪಡಿಸಿದರು.
ನನ್ನ ಮೊಮ್ಮಗ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾನೆ. ಅವರ ತಂದೆ ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ನನ್ನ ಅರವತ್ತು ವರ್ಷದ ರಾಜಕಾರಣದಲ್ಲಿ ಇಂತಹ ಕೆಟ್ಟ ರಾಜಕಾರಣವನ್ನು ನಾನು ನೋಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು ಮಾಜಿ ಪ್ರಧಾನಿಗಳು.
ನಿಮ್ಮ ಮುಂದೆ ಎದೆ ಚಾಚಿ ಮಾತನಾಡುತ್ತಿದ್ದೇನೆ
ಇಂತಹ ಕೆಟ್ಟ ರಾಜಕಾರಣ ಮತ್ತೆ ಈ ರಾಜ್ಯದಲ್ಲಿ ಇರಬಾರದು. ನಾನು ಇದನ್ನು ಅಸೂಯೆ ದ್ವೇಷದಿಂದ ಹೇಳುತ್ತಿಲ್ಲ. ವೈಯಕ್ತಿಕವಾಗಿ ನಾನು ಯಾರ ಬಗ್ಗೆಯೂ ಮಾತಾಡಲ್ಲ ಎಂದ ಅವರು; ನಾನು 11ನೇ ತಾರೀಕಿನವರೆಗೂ ಬರುತ್ತೇನೆ. ಮೊಮ್ಮಗನ ಗೆಲ್ಲಿಸೋಕೆ ಬರುತ್ತಿಲ್ಲ. ನನಗೆ ಜೀವನದಲ್ಲಿ ಒಂದೇ ಒಂದು ಗುರಿ ಇದೆ. ಋಣಾನುಬಂಧವೋ ಏನೋ, ಈಗ ಯಾರ ಮನೆ ಅನ್ನ ತಿನ್ನುತ್ತೇನೆಯೋ ಗೊತ್ತಿಲ್ಲ. ಅನ್ನದ ಋಣ ಯಾರ ಮನೆಗೆ ಕರೆದುಕೊಂಡು ಹೋಗುತ್ತದೊ ಗೊತ್ತಿಲ್ಲ. ಮಾಧ್ಯಮದವರು ದೇವೇಗೌಡರು ಮಾತಾಡ್ತಾರಾ ಎಂದು ಕೇಳುತ್ತಿದ್ದರು. ದೇವೇಗೌಡ್ರು ಏನು ಇಂಟರ್ ನ್ಯಾಶನಲ್ ಅಪರಾಧಿ ಆಗಿದ್ನಾ? ಮೂರು ತಿಂಗಳು ನನ್ನ ಮನೆ ಮುಂದೆ ಇದ್ದರಲ್ಲ. ಇವತ್ತು ನಿಮ್ಮ ಮುಂದೆ ಎದೆ ಚಾಚಿ ಮಾತನಾಡುತ್ತಿದ್ದೇನೆ. ಇನ್ನೂ ನಾಲ್ಕಾರು ವರ್ಷ ನಿಮ್ಮ ಆಶೀರ್ವಾದದಿಂದ ಇರುತ್ತೇನೆ. ನನ್ನ ಕೊನೆ ಉಸಿರು ಇರೋ ತನಕ ನನ್ನ ಶರೀರ ಇರೋ ತನಕ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಆಂಬ್ಯುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದಿದ್ದ ಡಿಕೆ ಸುರೇಶ್ ಮಾತಿಗೆ ತಿರುಗೇಟು ಕೊಟ್ಟರು ದೇವೇಗೌಡರು.
ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ,ಮಹಾಲಕ್ಷ್ಮಿ ಲೇಔಟ್ ಶಾಸಕರಾದ ಕೆ. ಗೋಪಾಲಯ್ಯ , ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ. ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ,ಮಾಜಿ ಶಾಸಕರುಗಳಾದ ಹೆಚ್.ಕೆ ಕುಮಾರಸ್ವಾಮಿ ,ಮಂಜು ಮುಖಂಡ ಅಬ್ದುಲ್ ನಜಿಮ್ಮ್, ಸೇರಿದಂತೆ ಜೆಡಿಎಸ್ ಬಿಜೆಪಿ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್ ಮೆನ್!!
ಯೋಗೇಶ್ವರ್ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಹೆಚ್.ಡಿ.ದೇವೇಗೌಡರು
ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು; ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್ ಮೆನ್ ಎಂದು ಟೀಕಿಸಿದರು.
ದೇವೇಗೌಡರ ಕೈ ನಡುಗುತ್ತವೆ, ಅವರು ಪ್ರಚಾರಕ್ಕೆ ಬರುತ್ತಾರಂತೆ.. ಹಾಗಂತೆ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್ ಮೆನ್ ಹೇಳುತ್ತಾರೆ. ನಾನು ಪ್ರಚಾರಕ್ಕೆ ಬರುತ್ತೇನೆ. ಹನ್ನೊಂದನೇ ತಾರೀಖಿನವರೆಗೂ ಪ್ರಚಾರಕ್ಕೆ ಬರುತ್ತೇನೆ ಎಂದು ಅವರು ಹೇಳಿದರು.
ಮೋದಿ ಹಾಗೂ ನನ್ನ ಸಂಬಂಧ ಚೆನ್ನಾಗಿದೆ. ಮುಂದೆಯೂ ಚೆನ್ನಾಗಿರುತ್ತದೆ. ರಾಜಕಾರಣಕ್ಕೆ ಮೀರಿದ ಸಂಬಂಧ ನಮ್ಮದು. ಆದರೆ, ಕಾಂಗ್ರೆಸ್ ನವರು ಹೇಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಕುಟುಂಬ ಬಿಟ್ಟರೆ ಮಾತನಾಡಲು ಬೇರೆ ವಿಷಯ ಇಲ್ಲ. ದೇವೇಗೌಡರೇ.. ಯಾಕೆ ನೀವು ನಿಮ್ಮ ಮೊಮ್ಮಗನನ್ನು ನಿಲ್ಲಿಸಿದ್ದೀರಿ ಎಂದು ಯಾರಾದರೂ ಕೇಳಬಹುದು. ಯಾವ ಕನ್ವರ್ಟಡ್ ಕಾಂಗ್ರೆಸ್ ನಾಯಕ ಇದ್ದಾರೋ, ಅವರನ್ನು ಬಿಜೆಪಿಯಿಂದಲಾದರೂ ನಿಲ್ಲಿ, ಜೆಡಿಎಸ್ ನಿಂದಲಾದರೂ ನಿಲ್ಲಿ ಎಂದು ಹೇಳಿದ್ದೇವು. ನಮಗೆ, ಬಿಜಿಪಿಯವರಿಗೆ ಮೋಸ ಮಾಡಿ ಹೋದರು. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಹೀಗಾಗಿ ಈ ಕುತಂತ್ರಕ್ಕೆ ಸಡ್ಡು ಹೊಡೆಯಲು ಸ್ಥಳೀಯ ಮುಖಂಡರು ಎಲ್ಲರೂ ಸೇರಿ ನಿಖಿಲ್ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಯಾರು ಕಾಂಗ್ರೆಸ್ ನಿಂದ ನಿಂತಿದ್ದಾರೋ ಅವರನ್ನು, ಬೇಡಪ್ಪ ನೀನು ಜೆಡಿಎಸ್ ನಿಂದ ನಿಂತ್ಕೋ ಎಂದು ಹೇಳಿದೆವು. ಅಲ್ಲದೇ ಅವರ ಪಕ್ಷದ ಅಧ್ಯಕ್ಷ ನಡ್ಡಾ ಅವರು ಕೂಡ ಬಿಜೆಪಿಯಿಂದ ಸ್ಪರ್ಧೆಗೆ ಸೂಚಿಸಿದರು. ಆ ಕನ್ವರ್ಟರ್ಡ್ ಕಾಂಗ್ರೆಸ್ ನಾಯಕನಿಗೆ.. ನೀನು ಪಕ್ಷಕ್ಕೆ ದ್ರೋಹ ಮಾಡಬೇಡ, ನೀನು ಪಕ್ಷದಿಂದಲೇ ನಿಲ್ಲುವಂತೆ ನಡ್ಡಾ ಹೇಳಿದರು. ಅವರ ಮಾತನ್ನು ಕೂಡ ಅವರು ತಿರಸ್ಕಾರ ಮಾಡಿದರು ಎಂದು ದೇವೇಗೌಡರು ಹೇಳಿದರು.
ಮುಖ್ಯಮಂತ್ರಿ ಗರ್ವದ ಸೊಕ್ಕನ್ನು ಮುರಿಯಬೇಕು
ಜೆ.ಬ್ಯಾಡರಹಳ್ಳಿಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು; ಮುಖ್ಯಮಂತ್ರಿಗೆ ಇರುವ ಗರ್ವದ ಸೊಕ್ಕನ್ನು ಮುರಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಅಪೂರ್ವ ಸಹೋದರು ಎಂದು ವ್ಯಂಗ್ಯವಾಡಿದ ಗೌಡರು!!
ಡಿಕೆ ಸಹೋದರರನ್ನು ಅಪೂರ್ವ ಸಹೋದರು ಎಂದು ಟಾಂಗ್ ಕೊಟ್ಟ ಹೆಚ್ಡಿಡಿ ಅವರು; ಆರು ತಿಂಗಳಿಂದ ಅಣಕದ ಮಾತು. ಯಾರು ಅಭ್ಯರ್ಥಿ ಅಂದರೆ ನಾನೇ.. ನಾನೇ…ನಾನೇ.. ನಾನೇ.. ಆ ನಾನೇ ಎನ್ನುತ್ತಿದ್ದವರು ಎಲ್ಲಿ ಹೋದರು ಈಗ? ಚನ್ನಪಟ್ಟಣಕ್ಕೆ ನಿಲ್ಲುವ ನಾನೇ.. ಇವಾಗ ಎಲ್ಲಿ ಹೋದಿರಿ? ಈಗ ಅಪೂರ್ವ ಸಹೋದರರು ತೀರ್ಮಾನ ಮಾಡಿದ್ದಾರೆ. ನಾನು ಅವರ ಹೆಸರೇಳಲ್ಲ. ಅವರ ಹೆಸರು ಹೇಳಿದರೆ ದೇವೇಗೌಡರು ವೆಂಟಿಲೇಟರ್ ಬಂದು ಭಾಷಣ ಮಾಡೋಕೆ ಬರ್ತಾರೆ ಎಂದು ಬಹಳ ಲಘುವಾಗಿ ಮಾತಾಡಿದರು. ಆದರೆ ನಾನು ನಿಮ್ಮ ಮುಂದೆ ಕೂತಿದ್ದೇನೆ. ಯಾವ ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.