ಚನ್ನಪಟ್ಟಣ: ಕರ್ನಾಟಕದ ಮೂರು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್ ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ.
ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ. ಅತ್ತ ನಿಖಿಲ್ ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ.
ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಂಡಿದ್ದ ಅವರು, ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲರಾಗಿದ್ದಾರೆ.
ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು.