ಮನೆ ಪೌರಾಣಿಕ ನವಗ್ರಹಗಳ ರಥಗಳು

ನವಗ್ರಹಗಳ ರಥಗಳು

0

      ಸೂರ್ಯಚಂದ್ರರಂತೆಯೇ ಜ್ಯೋತಿಶ್ಚಕ್ರದಲ್ಲಿ ಸ್ಥಿತಿವಂತರಾಗಿ ನೆಲೆಸಿರುವ ಇತರೆ ಗ್ರಹಗಳ ಅಧಿಪತಿಗಳಿಗೂ ಸಹ ಪ್ರಯಾಣ ಸಾಧನಗಳಿವೆ. ಗ್ರಹಮೂರ್ತಿಗಳಲ್ಲಿ ಚಂದ್ರನ ಅಂಶದೊಂದಿಗೆ ಜನಿಸಿದ ಬುಧನು ವಿಹರಿಸುವ ರಥವು ವಾಯು ಅಗ್ನಿಗಳ ಸಮ್ಮೇಳನದೊಂದಿಗೆ ರೂಪೊಂದಿದೆ.

Join Our Whatsapp Group

ಈ ರಥಾಶ್ವಗಳು ಎಂಟು ಗೋರೋಜನದ ಬಣ್ಣದೊಂದಿಗೆ ನೋಡಲು ಸೊಗಸಾಗಿರುತ್ತವೆ. ಶುಕ್ರನ ರಥವೂ ಸಹ ಸೂರ್ಯೇಂದ್ರ ವಾಹನಗಳಂತೆಯೇ ತುಂಬಾ ವಿಶಾಲವಾದುದು. ಈ ದಿವ್ಯರಥಕ್ಕೆ ಅಳವಡಿಸಿದ ಅಶ್ವಗಳು ಮಾತ್ರ ಎಲ್ಲವೂ ಭೂಮಿಯ ಮೇಲೆ ಜನಿಸಿರುವಂತಹವೇ. ರಥದಲ್ಲಿ ಶುಕ್ರಪೀಠಕ್ಕೆ ಹತ್ತಿರದಲ್ಲಿಯೇ ಧನುರ್ಬಾಣಗಳು ರಥಕ್ಕೆ ಅಚ್ಚುಗಳೂ ಸಹ ಇವೆ. ಅಷ್ಟ ಕೋನಾಕೃತಿಯಲ್ಲಿ ವಿಸ್ತರಿಸಿದ ಭೌಮರಥವು ಅಗ್ನಿಯಲ್ಲಿ ಸುಟ್ಟಿರುವ ಅಪರಂಜಿಯ ಬಣ್ಣದಲ್ಲಿ ಧಗಧಗನೆ ಹೊಳೆಯುತ್ತಿರುತ್ತದೆ. ಈ ಶತಾಂಗಕ್ಕೆ ಕಟ್ಟಿದ ತುರಗಗಳು ಎಂಟೂ ಕೂಡಾ ನೋಡಲು ಸುಂದರವಾಗಿರುವ ಬೆಳದಿಂಗಳ ಕಂಪಿನೊಂದಿಗೆ ಮಹಾವೇಗವಾಗಿ ಓಡುತ್ತಿರುತ್ತವೆ. ವರ್ಷಕ್ಕೆ ಒಂದೊಂದು ತಿಂಗಳಿನಂತೆ ರಾಶಿ ಚಕ್ರದಲ್ಲಿ ಸಂಚರಿಸುವ ಬೃಹಸ್ಪತೀ ರಥವು ಸ್ವರ್ಣ ವರ್ಣದಲ್ಲಿ ವರ್ಣನೀಯವಾಗಿ ಪ್ರಕಾಶಿಸುತ್ತಿರುತ್ತದೆ. ಈ ರಥಕ್ಕೆ ಪಾಂಡು ವರ್ಣದಲ್ಲಿ ಕಂಗೊಳಿಸುವ ಎಂಟು ಕುದುರೆಗಳನ್ನು ಜೋಡಿಸಲಾಗಿದೆ. ಸೂರ್ಯಸುತನಾದ ಶನೈಶ್ವರನ ರಥವು ಚಿತ್ರವಿಚಿತ್ರ ಕಾಂತಿಗಳೊಂದಿಗೆ ಹೊಳೆಯುತ್ತಾ ಮಂದಗಮನದೊಂದಿಗೆ ನಡೆಯುತ್ತದೆ. ಈ ರಥಕ್ಕೆ ಜೋಡಿಸಿರುವ ಕುದುರೆಗಳೆಲ್ಲವೂ ಸಹ ಆಕಾಶದಲ್ಲಿ ಪ್ರಭವಿಸಿರುವಂತಹವು.

        ಸ್ವರ್ಭಾನು ಮಂಡಲಾಧಿಪತಿ ರಾಹು ಅಸಿತಾಶ್ವಗಳನ್ನು ಕಟ್ಟಿದ ದೂಸರ ವರ್ಣದ ರಥವನ್ನು ಅಧಿರೋಹಿಸಿ, ಗ್ರಹಣ ಸಮಯಗಳಲ್ಲಿ ಸೂರ್ಯಚಂದ್ರರನ್ನು ಕಬಳಿಸುವುದಕ್ಕಾಗಿ ಮಹೋತ್ಸಾಹದೊಂದಿಗೆ ಉನ್ಮುಖನಾಗಿರುತ್ತಾನೆ. ಕೇತುಗ್ರಹ ರಥವು ಹೊಗೆಯಾಡಿದ ಕಸರು ಬಣ್ಣದಲ್ಲಿದೆ. ಇದಕ್ಕೆ ಕಟ್ಟಿರುವ ಕುದುರೆಗಳು ಎಂಟೂ ರಕ್ತವರ್ಣದೊಂದಿಗೆ ಇದ್ದು ಇವು ಹುಚ್ಚು ಹಿಡಿದಂತೆ ವಾಯುವೇಗದೊಂದಿಗೆ ಸಂಚರಿಸುತ್ತವೆ. ಈ ವಿಧವಾಗಿ ಜ್ಯೋತಿಶ್ಚಕ್ರಗತಿಯಾದ ಗ್ರಹತಾರಕಾ ನಕ್ಷತ್ರ ನಕ್ಷತ್ರಾವಸ್ಥಾನಗಳು ಸಮಸ್ತವು ವಾಯುನಾಳ ಬಂಧನಗಳಿಂದ ಧ್ರುವನ ಸ್ವಾಧೀನದಲ್ಲಿ ನಿಂತು ವಾಸುದೇವನ ಆಜ್ಞಾವಶವರ್ತರಾಗಿ ನಡೆಯುತ್ತಿವೆ. ಧ್ರುವ ಪದದಲ್ಲಿ ಮೊಸಳೆಯ ರೂಪವನ್ನು ತಾಳಿ ಜಗನ್ನೋಹನನಾಗಿ ನೆಲೆಸಿರುವ ಶಿಂಶುಮಾರನನ್ನು ರಾತ್ರಿಯ ವೇಳೆಯಲ್ಲಿ ಚರ್ಮ ಚಕ್ಷುಗಳೊಂದಿಗೆ ನೋಡುವಂತಹ ಪುಣ್ಯಾತ್ಮರಿಗೆ ಬಹು ಜನ್ಮ ಪಾಪಗಳು ಕಳೆದು ಅಭೀಷ್ಟ ಫಲಗಳು ಸಿದ್ಧಿಸುತ್ತವೆ.

    ”ಮೈತ್ರೇಯಾ! ತ್ರಿಲೋಕೇಶ್ವರನಾದ ಪುಂಡರೀಕಾಕ್ಷನ ಮಹಿಮೆಯಿಂದ ಅವತರಿಸಿದ ಶಿಂಶುಮಾರನು, ತದ್ಗತವಾದ ಜ್ಯೋತಿಶ್ಚಕ್ರ, ಸೂರ್ಯೇಂದ್ರ ಗ್ರಹತಾರಕ ನಕ್ಷತ್ರ ಸರ್ವಸ್ವವೂ, ಮಹಾದ್ವೀಪಗಳು ಕುಲಪರ್ವತಗಳು, ಸಮುದ್ರಗಳು, ನದೀಕೆರೆಗಳು, ಅರಣ್ಯಗಳು, ಪುಣ್ಯ ತೀರ್ಥಗಳು, ಭೂಮಂಡಲ, ಭೂರ್ಭುವಾದಿ ಲೋಕಗಳು, ವೇದಶಾಸ್ತ್ರ ಪುರಾಣ ಸಾಕಲ್ಯ, ಪುಣ್ಯ ಪಾಪಕರ್ಮಗಳು ಈ ಚರಾಚರ ಭೂತರಾಶಿಯೆಲ್ಲಾ ಆ ಶ್ರಿತಪಾವನನು ಶ್ರೀ ಮನ್ನಾರಾಯಣನ ಅಭಿವ್ಯಕ್ತ ರೂಪಗಳೇ ಆಗಿವೆ. ಶ್ರೀ ಮಹಾವಿಷ್ಣುವೇ ಶಿಂಶುಮಾರನು. ವಿಷ್ಣುವೇ ಜ್ಯೋತಿಶ್ಚಕ್ರ, ವಿಷ್ಣುವೇ ಮಹಾದ್ವೀಪಗಳು, ವಿಷ್ಣುವೇ ಕುಲ ಪರ್ವತಗಳು. ನದಿಗಳು, ಸೇತುವೆಗಳು, ಲೋಕಗಳು, ದಿಶೆಗಳು, ಪೃಥಭಾವದಿಂದ ಗೋಚರಿಸುತ್ತಿರುವ ಸರ್ವವೂ ಸರ್ವೆಶ್ವರನಾದ ಶ್ರೀ ಮಹಾವಿಷ್ಣುವಿನ ಅವತಾರಗಳೇ ಆಗಿವೆ. ಆ ರೀತಿಯಾಗಿ ಪರಾಶರ ಮುನೀಂದ್ರನು ಪ್ರೀತಿ ಆದರಣಗಳೊಂದಿಗೆ ವಿಶದೀಕರಿಸಿದ ಬ್ರಹ್ಮಾಂಡಸ್ವರೂಪ ವೈಭವವನ್ನು ಸಂಪೂರ್ಣವಾಗಿ ಗ್ರಹಿಸಿ, ಪರಮಾನಂದಭರಿತನಾದ ಮೈತ್ರೇಯನು ಈ ರೀತಿಯಾಗಿ ಪ್ರಶ್ನಿಸಿದನು. “ಆಚಾರ್ಯದೇವಾ! ನಾಭಿವರ್ಷಾಧೀಶ್ವರನಾದ ಭರತ ಮಹಾರಾಜನು ತನ್ನದೇ ಹೆಸರಿನಲ್ಲಿ ನೆಲೆಸಿರುವ ಭರತಖಂಡಕ್ಕೆ ಮಹಾರಾಜನಾಗಿದ್ದುಕೊಂಡು ತನ್ನ ಮಗನಾದ ಸುಮತಿಗೆ ಪಟ್ಟಾಭಿಷೇಕ ಮಾಡಿ, ಸಾಲಿಗ್ರಾಮ ತೀರ್ಥಕ್ಕೆ ಹೋಗಿ ಜನ್ಮಾಂತರದಲ್ಲಿ ವಿಪ್ರನಾಗಿ ಅವತರಿಸಿದನೆಂದು ಇದಕ್ಕೂ ಮುಂಚೆಯೇ ಹೇಳಿದಿರಿ. ಭರತರಾಜನ್ಯನು ತನಗೆ ವಿಹಿತವಾದ ಕ್ಷತ್ರಿಯ ಧರ್ಮವನ್ನು ನಿರಾಕ್ಷೇಪಣೀಯವಾಗಿ ನಿರ್ವಹಿಸಿ, ಅವಸಾನ ದೆಸೆಯಲ್ಲಿ ಮುನಿವೃತ್ತಿಯನ್ನು ಸ್ವೀಕರಿಸಿದ ಪುಣ್ಯಾತ್ಮನು. ಶ್ರೀಹರಿಯನ್ನು ನಂಬಿದ ಭಕ್ತನಾಗಿಯೂ ಸಹ ಆತನು ಮತ್ತೆ ಬ್ರಾಹ್ಮಣನಾಗಿ ಜನಿಸುವುದಕ್ಕೆ ಕಾರಣವೇನು? ಆನಂತರ ಅವನ ಜೀವನವು ಯಾವ ರೀತಿಯಾಗಿ ಮುಂದುವರೆಯಿತು? ಕರ್ಮವನ್ನು ಕಳೆದು ಮೋಕ್ಷಪದವನ್ನು ಅಧಿಗಮಿಸಿದನೇ? ಅಥವಾ ಸಾಮಾನ್ಯರಂತೆಯೇ ಸಂಸಾರ

ಬಂಧನಗಳಲ್ಲಿ ಸಿಕ್ಕಿಕೊಂಡು ನರಳಿದನೇ? ದಯೆಯಿಂದ ಆ ಚರಿತ್ರೆಯನ್ನು ಉಪದೇಶಿಸಿ ನನ್ನನ್ನು ಅನುಗ್ರಹಿಸಿರಿ”’ ಎಂದು ಪ್ರಾರ್ಥಿಸಿದ ಮೈತ್ರೇಯನಿಗೆ ಪರಾಶರ ಮಹರ್ಷಿಯು ಜಡಭರತೋಪಾಖ್ಯಾನವನ್ನು ಈ ರೀತಿವಿವರಿಸಿದನು.