ಬೆಳ್ತಂಗಡಿ: ಅಕ್ರಮ ಗೋ ಮಾಂಸ ಮಾಡಿ ತ್ಯಾಜ್ಯವನ್ನು ಗೋಣಿ ಚೀಲದಲ್ಲಿ ತುಂಬಿಸಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ (ಡಿ.17 ರಂದು) ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಅನಾರು ಸೇತುವೆ ಬಳಿ ದನದ ತಲೆ ಸೇರಿದಂತೆ ಅವಶೇಷಗಳು ಸುಮಾರು ಹನ್ನೊಂದು ಗೋಣಿಯಲ್ಲಿ ಪತ್ತೆಯಾಗಿದೆ.
ಚಾರ್ಮಾಡಿ ಗ್ರಾಮದ ಅನಾರು ಎಂಬಲ್ಲಿ ಸೇತುವೆ ಅಡಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟ ರೀತಿಯಲ್ಲಿ ದನದ ತಲೆ, ಚರ್ಮ ಹಾಗೂ ಇತರ ಅವಶೇಷಗಳು ಪತ್ತೆಯಾಗಿದ್ದು, ಯಾರೋ ಅಕ್ರಮವಾಗಿ ದನದ ಮಾಂಸ ವ್ಯವಹಾರ ನಡೆಸಿ ಉಳಿದ ತ್ಯಾಜ್ಯಗಳನ್ನು ಗೋಣಿಯಲ್ಲಿ ತುಂಬಿಸಿ ಸೇತುವೆಯಿಂದ ಎಸೆದಿರುವ ಬಗ್ಗೆ ಸಂಶಯಿಸಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆ ಸಿಬಂದಿ ಆಗಮಿಸಿ ಪರಿಶೀಲಿಸಿದ್ದಾರೆ. ಚಾರ್ಮಾಡಿ ಭಾಗದಲ್ಲಿ ಸಾಗುವಾಗ ರಸ್ತೆ ಅಂಚಿನಲ್ಲಿ ಕೊಳೆತ ರೀತಿಯಲ್ಲಿ ವಾಸನೆ ಬರುತ್ತಿರುತ್ತದೆ. ಈ ಭಾಗದಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಅನೇಕ ಬಾರಿ ದೂರುಗಳು ಕೇಳಿ ಬಂದಿವೆ. ಆದರೂ ಇಂತಹ ಕೃತ್ಯ ನಡೆಸಲಾಗುತ್ತಿದೆ. ಈ ಬಗ್ಗೆ ಕಠಿನ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ














