ಮನೆ ದೇವಸ್ಥಾನ ಅವಸಾನದ ಅಂಚಿನಲ್ಲಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ

ಅವಸಾನದ ಅಂಚಿನಲ್ಲಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ

0

ದೇವಾಲಯಗಳು ನಮ್ಮ ಕಲಾಶ್ರೀಮಂತಿಕೆಗೆ, ವಾಸ್ತು ವೈಭವಕ್ಕೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮ, ಸಂಸ್ಕೃತಿ ಪರಂಪರೆಯ ಪ್ರತೀಕಗಳಾಗಿವೆ. ಆದರೆ, ನಾಡಿನ ಹಲವು ಅಮೂಲ್ಯ ದೇವಾಲಯಗಳು ಸ್ಥಳೀಯರ, ಮುಜರಾಯಿ ಇಲಾಖೆಯ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅವಸಾನದ ಅಂಚಿನಲ್ಲಿವೆ. ಇಂಥ ಒಂದು ಅಪೂರ್ವ ದೇವಾಲಯಗಳ ಪೈಕಿ ಒಂದು ಬೇಲೂರು ತಾಲೂಕು, ಹಳೇಬೀಡು ಹೋಬಳಿ ಚಟಚಟ್ಟಿಹಳ್ಳಿಯ ತ್ರಿಕೂಟಾಚಲ ದೇವಾಲಯ.

ಹಳೇಬೀಡಿನಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಹೊಯ್ಸಳರ ಅರಸು 2ನೇ ನರಸಿಂಹ ಬಲ್ಲಾಳನ ಕಾಲದಲ್ಲಿ ನಿರ್ಮಿತವಾದ 3 ಗರ್ಭಗೃಹ ಹಾಗೂ 3 ಗೋಪುರಗಳುಳ್ಳ ದೇವಾಲಯವಿದೆ. ಇಲ್ಲಿ ದೊರೆತಿರುವ ಶಾಸನದಲ್ಲಿ 2ನೇ ನರಸಿಂಹ ಬಲ್ಲಾಳನ ಸೇನಾಧಿಪತಿ ಚಟ್ಟಯ್ಯ ಪೆರುಮಾಳ್ ದಾಸಶೆಟ್ಟೀಕೆರೆಯನ್ನು ಕ್ರಿ.ಶ.1221ರಲ್ಲಿ ನಿರ್ಮಿಸಿದನೆಂದೂ ತಿಳಿದುಬರುತ್ತದೆ. 57 ಎಕರೆ ವಿಸ್ತೀರ್ಣ ಹೊಂದಿರುವ ಈ ದೊಡ್ಡ ಕೆರೆಯ ಅಂಚಿನಲ್ಲಿ ಆತನೇ ಈ ತ್ರಿಕೂಟಾಚಲ ನಿರ್ಮಿಸಿದ್ದಾನೆ ಎಂದು ತಿಳಿದುಬರುತ್ತದೆ.

3 ಗರ್ಭಗೃಹಗಳ ಪೈಕಿ ಪ್ರಧಾನ ಗರ್ಭಗುಡಿಯಲ್ಲಿ ಚಟಚಟ್ಟೇಶ್ವರಲಿಂಗ, 2ನೇ ಗರ್ಭಗೃಹದಲ್ಲಿ ಹರಿಹರ ಹಾಗೂ 3ನೇ ಗರ್ಭಗೃಹದಲ್ಲಿ ಸೂರ್ಯನಾರಾಯಣ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

6 ಅಡಿ ಎತ್ತರ ಇರುವ ಸೂರ್ಯನಾರಾಯಣನ ವಿಗ್ರಹ ಆ ಕಾಲದಲ್ಲಿ ಸೂರ್ಯಾರಾಧನೆ ಇತ್ತೆಂಬುದಕ್ಕೆ, ಜೀವರಾಶಿಗಳಿಗೆಲ್ಲಾ ಚೈತನ್ಯ ನೀಡುವ ಸೂರ್ಯನ ಪೂಜೆಯ ಪದ್ಧತಿಗೆ ಸಾಕ್ಷಿಯಾಗಿ ನಿಂತಿದೆ. ಒಂದೇ ದೇವಾಲಯದಲ್ಲಿ ಹರಿ ಹರರನ್ನು ಪ್ರತಿಷ್ಠಾಪಿಸಿ ಶೈವ, ವೈಷ್ಣವರಲ್ಲಿ ಭೇದವಿಲ್ಲ ಎಂದು ಸಾರುವ ಪ್ರಯತ್ನವನ್ನು ಮಾಡಲಾಗಿದೆ. ಹರಿಹರಕ್ಷೇತ್ರವೆಂದೇ ಖ್ಯಾತವಾದ ಇದು ಸಾಮರಸ್ಯದ ಸಂಕೇತವಾಗಿದೆ.

ಪ್ರಾಚೀನವಾದ ಈ ದೇವಾಲಯದ ಭಿತ್ತಿಗಳಲ್ಲಿ ಸೂಕ್ಷ್ಮೆ ಕೆತ್ತನೆಗಳಿಲ್ಲದಿದ್ದರೂ, ಅರೆಗಂಬಗಳಿವೆ. ಆಧಾರಕ್ಕೆ ನೀಡಿರುವ ಕಂಬಗಳಲ್ಲಿರುವ ಕೆತ್ತನೆ ಸುಂದರವಾಗಿದೆ. ಜಾಲಂದ್ರ, ಸುಖನಾಸಿ, ಭುವನೇಶ್ವರಿ, ಗರ್ಭಗೃಹ, ನವರಂಗದ ಮೇಲ್ಛಾವಣಿಗಳಲ್ಲಿ ಭವ್ಯವಾದ ಕೆತ್ತನೆಗಲಿವೆ.

3 ಗೋಪುರಗಳ ಪೈಕಿ ಒಂದು ಗೋಪುರ ಈಗಾಗಲೇ ಕುಸಿದಿದ್ದು, ಇನ್ನೆರೆಡು ಗೋಪುರಗಳೂ ಬೀಳುವ ಹಂತದಲ್ಲಿವೆ. ಗೋಡೆಗಳಲ್ಲಿ ಬಿರುಕು ಉಂಟಾಗಿದೆ. ಇಂಥ ಐತಿಹಾಸಿಕ ದೇವಾಲಯದ ಸುತ್ತ ಈಗ ಗಿಡಗಂಟಿ ಬೆಳೆದು ಪ್ರವೇಶವೂ ದುರ್ಗಮವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡುವಂತೆ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ಆಗ್ರಹಿಸಿದ್ದು, ಜನಜಾಗೃತಿ ಉಂಟು ಮಾಡಿ, ಈಗ ದೇವಾಲಯದ ಜೀರ್ಣೋದ್ಧಾರಕ್ಕೂ ಶ್ರಮಿಸುತ್ತಿದೆ.