ಮನೆ ಅಪರಾಧ ಖಾತಾ ವರ್ಗಾವಣೆಗಾಗಿ ಚಲನ್ ಫೋರ್ಜರಿ ಮಾಡಿ ಮುಡಾಗೆ ಮೋಸ: 5 ಮಂದಿ ವಿರುದ್ಧ ಲಕ್ಷ್ಮೀಪುರಂ ಪೊಲೀಸ್...

ಖಾತಾ ವರ್ಗಾವಣೆಗಾಗಿ ಚಲನ್ ಫೋರ್ಜರಿ ಮಾಡಿ ಮುಡಾಗೆ ಮೋಸ: 5 ಮಂದಿ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0

ಮೈಸೂರು: ಬ್ಯಾಂಕ್ ಆಫ್ ಬರೋಡದ ಚಲನ್ ಗಳನ್ನ ಫೋರ್ಜರಿ ಮಾಡಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಉಂಡೆನಾಮ ಇಟ್ಟ  ಭಾರಿ ಗೋಲ್ ಮಾಲ್ ಪ್ರಕರಣ ಬೆಳಕಿಗೆ ಬಂದಿದೆ.

ಖಾತಾ ವರ್ಗಾವಣೆಗಾಗಿ ಅರ್ಜಿದಾರರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಹಣ ಪಾವತಿಸಿದಂತೆ ಚಲನ್ ಗಳನ್ನ ಸೃಷ್ಟಿಸಿ ಮೋಸ ಮಾಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಡಾ ವಲಯ ಕಚೇರಿ 3 ಮತ್ತು 5 ಎ & 5 ಬಿ ಯ ವಿಶೇಷ ತಹಶೀಲ್ದಾರ್ ರವರು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಖಾಸಗಿ ಬಡಾವಣೆಗಳ ಇ ಖಾತಾ ವರ್ಗಾವಣೆಗಾಗಿ ಅರ್ಜಿದಾರರು ಅರ್ಜಿ  ಸಲ್ಲಿಸಿದ್ದಾರೆ. ಅರ್ಜಿದಾರರಿಗೆ ಬ್ಯಾಂಕ್ ಆಫ್ ಬರೋಡದಲ್ಲಿ ಹಣ ಪಾವತಿಸುವಂತೆ ಚಲನ್ ಗಳನ್ನ ನೀಡಲಾಗಿದೆ.

ಸದರಿ ಅರ್ಜಿದಾರರು ಹಣ ಪಾವತಿಸಿದ ಚಲನ್ ಗಳನ್ನ ಅಗತ್ಯ ದಾಖಲೆಗಳೊಂದಿಗೆ ಸಂಭಂಧಪಟ್ಟ ಕಚೇರಿಗೆ ಸಲ್ಲಿಸಿದ್ದಾರೆ. ನಂತರ ಖಾತಾ ವರ್ಗಾವಣೆಯೂ ಆಗಿದೆ. ನಿಯಮಾನುಸಾರ ದಾಖಲೆಗಳನ್ನ ಪರಿಶೀಲಿಸಿದಾಗ ಹಣ ಪಾವತಿಯಾಗಿರುವುದಿಲ್ಲ. ಅರ್ಜಿದಾರರು ನೀಡಿದ ಚಲನ್ ಗಳನ್ನ ಪರಿಶೀಲಿಸಿದಾಗ ನಕಲು ಎಂದು ಖಚಿತವಾಗಿದೆ. ಚಲನ್ ಮೇಲೆ ಬ್ಯಾಂಕ್ ಆಫ್ ಬರೋಡಾದ ನಕಲಿ ಮೊಹರು ಕಂಡು ಬಂದಿದೆ. ಸದ್ಯಕ್ಕೆ 5 ಅರ್ಜಿದಾರರಿಂದ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.

ಎಂ.ಎಸ್.ಮೋಹನ್ ಕುಮಾರ್ ಎಂಬುವರು ರೂ.8050/-, ಗಾಲಿ ಆನಂದ ರೆಡ್ಡಿ ಎಂಬುವರು ರೂ.8279/-,ಆರ್.ಯೋಗೇಶ್ ಪ್ರಸಾದ್ ಎಂಬುವರು ರೂ.8800/- , ವಿ.ಆರ್.ಗಿರೀಶ್ ಎಂಬುವರು ರೂ.16899/- ಹಾಗೂ ಸಿ.ಡಿ.ವೇಣುಗೋಪಾಲ್ ಎಂಬುವರು ರೂ.40,050/- ರೂ ಮೌಲ್ಯದ ನಕಲಿ ಚೆಲನ್ ಗಳನ್ನ ನೀಡಿ ಪ್ರಾಧಿಕಾರಕ್ಕೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ರೀತಿ ಪ್ರಕರಣಗಳು ವಲಯ ಕಚೇರಿ 6 ರಲ್ಲೂ ಸಹ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದಾಖಲೆ ಒದಗಿಸಿದ ಬಳಿಕ ತನಿಖೆ ನಡೆಸಲು ನಿರ್ಧಾರ

ವಸತಿ ಬಡಾವಣೆಯ ನಿವೇಶನಗಳಿಗೆ ಸಂಬಂಧಿಸಿದ ಕಡತವೊಂದಕ್ಕೆ ತಮ್ಮ ಸಹಿಯನ್ನು ನಕಲಿ ಮಾಡಿ ಅನುಮೋಧನೆ ನೀಡಲಾಗಿರುವ ಕುರಿತು ಕೆ.ಎಸ್ ಅಧಿಕಾರಿ ನೀಡಿದ ದೂರು ಕುರಿತು ಪರಿಶೀಲನೆ ನಡೆಸಿ ದಾಖಲೆ ಸಮೇತ ದಾಖಲೆ ಸಮೇತ ವರದಿ ನೀಡುವಂತೆ ಮೂಡ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ದಾಖಲೆ ದೊರೆತ ಬಳಿಕ ಮುಂದಿನ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

ಮೂಡ ನಿಕಟಪೂರ್ವ ಕಾರ್ಯದರ್ಶಿ ಕುಸುಮಾ ಕುಮಾರಿ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು, ಸಹಿ ನಕಲಿ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ವರದಿ ಕೊಡಬೇಕು. ನಿವೇಶನ ಅನುಮೋದನೆಗೆ ಸಂಬಂಧಿಸಿದ ಪ್ರತಿಯೊಂದು ಕಡತವನ್ನು ಸಮಗ್ರವಾಗಿ ಪರಿಶೀಲಿಸಿ ದಾಖಲೆ ಸಮೇತ ವರದಿ ನೀಡಬೇಕು ಎಂದು ಹೇಳಿದ್ದಾರೆ.

ಹೀಗಾಗಿ ಮೂಡ ಆಯುಕ್ತರು ದಾಖಲೆಗಳನ್ನು ಪರಿಶೀಲಿಸಿ ಎರಡು ಮೂರು ದಿನಗಳಲ್ಲಿ ವರದಿ ಸಲ್ಲಿಸಿದ್ದಾರೆ. ಈ ದೂರನ್ನು ಪರಿಗಣಿಸಿರುವ ಡಿಸಿ ಡಾ. ಕೆ.ವಿ. ರಾಜೇಂದ್ರ ಅವರು ಪರಿಶೀಲಿಸಿ ವರದಿ ಕೊಡುವಂತೆ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ, ಆರೋಪದ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಸಮಗ್ರ ಮಾಹಿತಿಯೊಂದಿಗೆ ವರದಿ ನೀಡುವಂತೆ ಆಯುಕ್ತರಿಗೆ ಕಳುಹಿಸಿದ್ದೇನೆ. ವರದಿ ಬಂದ ಬಳಿಕ ತನಿಖೆ ನಡೆಸಿ ಅಕ್ರಮ ಎಸಿಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಣ ಪಾವತಿ ಪರಿಶೀಲನೆಗೆ ತಂಡ ರಚನೆ

ಮುಡಾ ಖಾತೆಗೆ ವಿವಿಧ ಸೇವೆಗಾಗಿ ಅರ್ಜಿದಾರರು ಹಣ ಪಾವತಿಸಿರುವ ಬಗ್ಗೆ ಲೆಕ್ಕ ಶಾಖೆಯಲ್ಲಿ ಪರಿಶೀಲನೆ ನಡೆಸಲು ನಾಲ್ವರು ಅಧಿಕಾರಿಗಳ ಒಳಗೊಂಡ ತಂಡ ರಚಿಸಲಾಗಿದೆ.

ಮೂಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಈ ಸಂಬಂಧ ಇಂದು ಅಧಿಕೃತ ಜ್ಞಾಪನ ಹೊರಡಿಸಿದ್ದು, ಪ್ರಾಧಿಕಾರ ನಗರದ ಯೋಜಕ ಸದಸ್ಯ ಆರ್. ಶೇಷ, ಮುಖ್ಯ ಲೆಕ್ಕಾಧಿಕಾರಿ ಎನ್. ಮುತ್ತಾ, ಕಾರ್ಯದರ್ಶಿ ಜಿ.ಟಿ. ಶೇಖರ್, ಎಕ್ಸಿಕ್ಯೂಟಿವ್ ಇಂಜಿನಿಯರ್ (ದಕ್ಷಿಣ) ಕೆ.ಆರ್. ಮಹೇಶ್ ಅವರನ್ನ ತಂಡಕ್ಕೆ ನಿಯೋಜಿಸಿ 15 ದಿನದೊಳಗಾಗಿ ಅವಶ್ಯ ಅಧೀನ ಸಿಬ್ಬಂದಿಗಳ ನೆರವು ಪಡೆದು ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ನಕ್ಷೆ ಅನುಮೋದನೆ ಸಿಆರ್, ವಾಸ ಯೋಗ್ಯ ಪ್ರಮಾಣಪತ್ರ, ಖಾತಾ ನೊಂದಣಿ, ಹಕ್ಕು ಪತ್ರ, ಸೇರಿದಂತೆ ವಿವಿಧ ಸೇವೆಗಾಗಿ ಶುಲ್ಕ ಪಾವತಿಸಿರುವ ಬಗ್ಗೆ ಬ್ಯಾಂಕ್ ಚಲನ್ ಹಾಗೂ ಪ್ರಾಧಿಕಾರದ ಖಾತೆಗೆ ಹಣದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ 2023ರ ಜನವರಿ 1 ರಿಂದ ಈವರೆಗಿನ ಎಲ್ಲಾ ಪ್ರಕರಣಗಳ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ತಂಡದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅದರನ್ವಯ ನಾಲ್ವರು ಅಧಿಕಾರಿಗಳು ಇಂದು ಮಧ್ಯಾಹ್ನದಿಂದಲೇ ಪ್ರಾಧಿಕಾರದ ಲೆಕ್ಕ ಶಾಖೆಗೆ ಬ್ಯಾಂಕ್ ಆಫ್ ಬರೋಡ ಶಾಖೆ ಯಿಂದ ಬಂದಿರುವ ಹಣ ಪಾವತಿ ಚಲನ್, ಲೆಕ್ಕದ ದಾಸ್ತಾವೇಜಿನಲ್ಲಿ ನಮೂದಿಸಿರುವ ಮಾಹಿತಿಗಳನ್ನ ಪರಿಶೀಲಿಸಲು ಆರಂಭಿಸಲಾಗಿದೆ.