ಮನೆ ಅಪರಾಧ ಡಬಲ್ ಹಣ ಕೊಡುವುದಾಗಿ ನಂಬಿಸಿ ಮೋಸ: ಇಬ್ಬರು ಮಹಿಳೆಯರಿಂದ 3 ಕೋಟಿ ರೂ ವಂಚನೆ

ಡಬಲ್ ಹಣ ಕೊಡುವುದಾಗಿ ನಂಬಿಸಿ ಮೋಸ: ಇಬ್ಬರು ಮಹಿಳೆಯರಿಂದ 3 ಕೋಟಿ ರೂ ವಂಚನೆ

0

ಹಾಸನ : ನನಗೆ ಸೇರಿದ ನೂರಾರು ಕೋಟಿ ಆಸ್ತಿ ನ್ಯಾಯಾಲಯದಲ್ಲಿದೆ ಎಂದು ನಂಬಿಸಿ ಕೋಟ್ಯಾಂತರ ರೂಪಾಯಿಯನ್ನ ಜನಗಳಿಂದ ಪಡೆದು ವಂಚಿಸಿರುವ ಆರೋಪದ ಮೇಲೆ ಹಾಸನ ಮೂಲದ ಇಬ್ಬರು ಮಹಿಳೆಯರು ಸೇರಿ ಒಟ್ಟು ಎಂಟು ಜನರ ವಿರುದ್ಧ 22 ಜನರು ಸಕಲೇಶಪುರ  ತಾಲ್ಲೂಕಿನ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Join Our Whatsapp Group

ಹಾಸನ ನಗರ ಮೂಲದ ಅನುಷಾ ಅಲಿಯಾಸ್​ ಕೃಪಾ, ಭುವನೇಶ್ವರಿ ಅಲಿಯಾಸ್​ ಅಶ್ವಿನಿ ಮತ್ತು ದೇವರಾಜ್, ಗಫಾರ್, ಶಶಿ, ಅಭಿಷೇಕ್, ಹರೀಶ್ ಸಾಗರ್ ವಿರುದ್ದ 3 ಕೋಟಿ 80 ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ, ವಳಲಹಳ್ಳಿ, ನಿಡ್ತಾ ಹಾಗೂ ಕರಗೂರು ಸೇರಿ ಹಲವು ಹಳ್ಳಿ ಜನರ ಬಳಿ ಹೋಗಿ ನನಗೆ ಸೇರಿದ ನೂರಾರು ಕೋಟಿ ಮೌಲ್ಯದ ಆಸ್ತಿ ಹಾಗೂ ಮೂರುವರೆ ಕೋಟಿಯಷ್ಟು ನಗದು ಕೋರ್ಟ್ ಕೇಸ್​ ನಲ್ಲಿ ಸಿಲುಕಿರುವ ಬಗ್ಗೆ ಆರೋಪಿ ಮಹಿಳೆ ಅನುಷಾ ಹೇಳಿದ್ದಾರೆ. ಜೊತೆಗೆ ತಾನು ಆಗರ್ಭ ಶ್ರೀಮಂತೆ, ನನ್ನ ಬಳಿಯ ಅಪಾರ ಮೌಲ್ಯದ ಆಸ್ತಿ ಕೋರ್ಟ್ ವ್ಯಾಜ್ಯಕ್ಕೆ ಸಿಲುಕಿದೆ. ಕೋರ್ಟ್ ವ್ಯಾಜ್ಯ ಬಗೆಹರಿಯಲಿ ಎಂದು ಸಕಲೇಶಪುರ ತಾಲ್ಲೂಕಿನ ದೊಡ್ಡನಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಪ್ರತೀ ತಿಂಗಳು ಬಂದು, ಹಂದಿವೊಂದನ್ನು ಬಲಿಕೊಟ್ಟು ಪೂಜೆ ಸಲ್ಲಿಸುತ್ತಿದ್ದರು.

ಇನ್ನು ಅನುಷಾ ಪೂಜೆಗೆ ಬಂದಾಗ ಅಲ್ಲಿಗೆ ಪೂಜೆಗೆ ಬಂದವರ ಜೊತೆ ವಿಶ್ವಾಸಗಳಿಸಿ, 2018 ರಿಂದ ನಿರಂತರವಾಗಿ ಅವರಿಗೆ ಸುಳ್ಳು ಹೇಳಿ ಹಣ ಪಡೆದು ‘ತಾನು ಕಷ್ಟದಲ್ಲಿದ್ದು, ಈಗ ಸಹಾಯ ಮಾಡಿದ್ರೆ ನೀವು ಕೊಟ್ಟ ಹಣಕ್ಕೆ ಡಬಲ್ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಹಿನ್ನಲೆ ಅನುಷಾ, ಭುವನೇಶ್ವರಿ ಸೇರಿ ಎಂಟು ಜನರ ವಿರುದ್ದ ಎಫ್​ಐಆರ್ ದಾಖಲು ಮಾಡಲಾಗಿದೆ. ಒಟ್ಟು ಫೋನ್ ಪೇ ಮೂಲಕ 1.46 ಕೋಟಿ ಹಾಗೂ ನಗದಾಗಿ 2.34 ಕೋಟಿ ಹಣ ಪಡೆದಿರುವ ಬಗ್ಗೆ ದೂರು ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.