ಮನೆ ಕಾನೂನು ಚೆಕ್ ಬೌನ್ಸ್ ಪ್ರಕರಣ: ಆರೋಪಿ ಗೈರು ಹಾಜರಿಯಲ್ಲಿ ವಿಚಾರಣೆ ಮುಂದುವರಿಸಲು ಸಾಧ್ಯವಿಲ್ಲ: ಹೈಕೋರ್ಟ್

ಚೆಕ್ ಬೌನ್ಸ್ ಪ್ರಕರಣ: ಆರೋಪಿ ಗೈರು ಹಾಜರಿಯಲ್ಲಿ ವಿಚಾರಣೆ ಮುಂದುವರಿಸಲು ಸಾಧ್ಯವಿಲ್ಲ: ಹೈಕೋರ್ಟ್

0

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆರೋಪಿ ಗೈರು ಹಾಜರಿದ್ದಾಗ ಎಕ್ಸ್ ಪಾರ್ಟಿ (ಒಂದು ಕಡೆ ಮಾತ್ರ) ಮಾಡಿ ವಿಚಾರಣೆ ಮುಂದುವರೆಸಲು, ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

Join Our Whatsapp Group

ಹಾಗೆಯೇ, ಆರೋಪಿಗೆ ಸಮನ್ಸ್ ಜಾರಿ ಮಾಡಿದ ನಂತರವೂ ಗೈರು ಹಾಜರಾದರೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಿರುವ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಬೇಕು. ಬದಲಿಗೆ ಎಕ್ಸ್ ಪಾರ್ಟಿ ಮಾಡಿ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಬಾರದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಚೆಕ್ ಬೌನ್ಸ್ ಕೇಸ್‍ ನಲ್ಲಿ ಉಡುಪಿಯ ಜೆಎಂಎಫ್‍ಸಿ ನ್ಯಾಯಾಲಯ ತಮಗೆ ವಿಧಿಸಿರುವ ಶಿಕ್ಷೆ ಹಾಗೂ ಅದನ್ನು ಎತ್ತಿ ಹಿಡಿದಿರುವ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅದೇಶ ರದ್ದು ಕೋರಿ ಶಿವಮೊಗ್ಗದ ಅಬ್ದುಲ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಪಿಟಿಷನ್ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ತೀರ್ಪು ನೀಡಿದೆ.ಪೀಠ ತನ್ನ ತೀರ್ಪಿನಲ್ಲಿ, ಜೆಎಂಎಫ್‍ ಸಿ ಕೋರ್ಟ್ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೇ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದೆ, ಈ ಅದೇಶವನ್ನು ಸೆಷನ್ಸ್ ಕೋರ್ಟ್ ಕೂಡ ಸರಿಯಾಗಿ ಪರಿಶೀಲಿಸದೇ ಪುರಸ್ಕರಿಸಿದೆ.

ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ. ಸುಪ್ರೀಂಕೋರ್ಟ್ ತೀರ್ಪುಗಳನ್ನು ಕೂಡ ಅರ್ಥೈಸಿಕೊಳ್ಳುವಲ್ಲಿ ವಿಚಾರಣಾ ನ್ಯಾಯಾಲಯಗಳು ವಿಫಲವಾಗಿವೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೇ, ಸಿಆರ್‍ ಪಿಸಿ ಸೆಕ್ಷನ್ 299ರ ಸಂದರ್ಭಗಳ ಹೊರತಾಗಿ ಸೆಕ್ಷನ್ 273ರ ಪ್ರಕಾರ ಅರೋಪಿ ಎದುರಲ್ಲೇ ವಿಚಾರಣಾ ಪ್ರಕ್ರಿಯೆ ನಡೆಯಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆರೋಪಿಯ ಅಥವಾ ಆರೋಪಿ ಪರ ವಕೀಲರ ಗೈರು ಹಾಜರಿಯಲ್ಲಿ ಸಾಕ್ಷ್ಯಗಳನ್ನು ದಾಖಲಿಸಲು ಅವಕಾಶವಿಲ್ಲ. ಈ ಪ್ರಕರಣದಲ್ಲಿ ಆರೋಪಿ ಗೈರು ಹಾಜರಾಗಿದ್ದಾರೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತಹ ಯಾವುದೇ ಕ್ರಮಗಳನ್ನು ವಿಚಾರಣಾ ನ್ಯಾಯಾಲಯ ಕೈಗೊಂಡಂತೆ ಕಾಣುವುದಿಲ್ಲ.ಸುಪ್ರೀಂಕೋರ್ಟ್ ತೀರ್ಪುಗಳನ್ನು ಕೂಡ ಸರಿಯಾಗಿ ಅರ್ಥೈಸಿಕೊಂಡಿಲ್ಲ. ಕಾನೂನು ಪ್ರಕ್ರಿಯೆಗಳನ್ನು ಕೈಬಿಟ್ಟು ಅರ್ಜಿದಾರರಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುವ ವಿಚಾರಣಾ ನ್ಯಾಯಾಯಗಳ ಕ್ರಮ ನಿಯಮ ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಉಡುಪಿಯ ಮೊಹಮ್ಮದ್ ಇಕ್ವಾಲ್ ಎಂಬುವರು ಶಿವಮೊಗ್ಗದ ಆಗುಂಬೆಯ ಅಬ್ದುಲ್ ಎಂಬುವರ ವಿರುದ್ಧ 6 ಚೆಕ್ ಬೌನ್ಸ್ ಕೇಸ್‍ ಗಳನ್ನು ದಾಖಲಿಸಿದ್ದರು, ಈ ಪ್ರಕರಣಗಳ ವಿಚಾರಣೆ ನಡೆಸಿದ್ದ 3ನೆ ಹೆಚ್ಚುವರಿ ಸಿವಿಲ್ ಅಂಡ್ ಜೆಎಂಎಫ್‍ ಸಿ ಕೋರ್ಟ್ ಆರೋಪಿ ಗೈರು ಹಾಜರಿಯಲ್ಲಿ ವಿಚಾರಣೆ ಮುಗಿಸಿ ಶಿಕ್ಷೆ ವಿಧಿಸಿತ್ತು, ಈ ಆದೇಶವನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪುರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು, ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ.ಹೆಗ್ಡೆ ವಾದ ಮಂಡಿಸಿದ್ದರು.

ಹಿಂದಿನ ಲೇಖನಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಆಡಳಿತ ರಾಜಮನೆತನಕ್ಕೆ ಸೇರಿದ್ದು : ಸುಪ್ರೀಂ ಕೋರ್ಟ್ ತೀರ್ಪು
ಮುಂದಿನ ಲೇಖನವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರನ್ನು ಹೊರತರಲು ಯತ್ನಿಸಿದ ಇಬ್ಬರು ಯುವಕರು ವಿದ್ಯುತ್ ಪ್ರವಹಿಸಿ ಸಾವು