ಮನೆ ಕಾನೂನು ಪತಿಯ ಸಹಿಯಿರುವ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್

ಪತಿಯ ಸಹಿಯಿರುವ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್

0

ಪತಿಯ ಸಹಿಯಿರುವ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಈಚೆಗೆ ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಗೃಹಿಣಿಯೊಬ್ಬರ ವಿರುದ್ಧದ ಚೆಕ್ ಬೌನ್ಸ್ ದೂರು ರದ್ದುಪಡಿಸಿದೆ.

ಬೆಂಗಳೂರಿನ ಮಹಿಳೆ ವೀಣಾಶ್ರೀ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ಪೀಠವು ಮಾನ್ಯ ಮಾಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರೆ ವೀಣಾಶ್ರೀಯು ಶಂಕರ್ ಎಂಬುವವರಿಂದ ಹಣದ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಭದ್ರತಾ ಖಾತರಿಯಾಗಿ ವೀಣಾಶ್ರೀ ಅವರು ತಮ್ಮ ಪತಿಯ ಸಹಿಯಿರುವ ಚೆಕ್ ನೀಡಿದ್ದರು. ಆ ಚೆಕ್ ಬೌನ್ಸ್ ಆದ ಕಾರಣ, 2017ರಲ್ಲಿ 22ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶಂಕರ್ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವೀಣಾಶ್ರೀ ಅವರು ತಮ್ಮ ವಿರುದ್ಧದ ದೂರು ರದ್ದುಪಡಿಸಲು ಕೋರಿ ಹೈಕೋರ್ಟ್’ಗೆಅರ್ಜಿ ಸಲ್ಲಿಸಿದ್ದರು.

“ಬೌನ್ಸ್ ಆಗಿರುವ ಚೆಕ್ಗೆ ತಾವು ಸಹಿ ಹಾಕಿಲ್ಲ. ಪತಿಯಷ್ಟೇ ಸಹಿ ಹಾಕಿರುವ ಕಾರಣ ತಮ್ಮನ್ನು ಅಭಿಯೋಜನೆಗೆ ಗುರಿಪಡಿಸಲು ಸಾಧ್ಯವಿಲ್ಲ” ಎಂದು ಅರ್ಜಿದಾರೆ ಪೀಠದ ಗಮನಸೆಳೆದರು.

ಅರ್ಜಿ ವಿಚಾರಣೆ ನಡೆಸಿದ ಪೀಠವು “ಪ್ರಕರಣದಲ್ಲಿ ಚೆಕ್’ಗೆ ಅರ್ಜಿದಾರೆ ಸಹಿ ಹಾಕಿಲ್ಲ. ವಿತರಿಸಲಾಗಿರುವ ಚೆಕ್ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಅರ್ಜಿದಾರೆಯ ಪತಿ ಚೆಕ್ ನೀಡಿರುವುದಾಗಿ ದೂರುದಾರರೇ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಪ್ರಕರಣದ ಮೂವರು ಆರೋಪಿಗಳಿದ್ದು, ಅವರು ಕಂಪೆನಿ, ಸಂಸ್ಥೆ ಅಥವಾ ಸಂಘವನ್ನು ಆರಂಭಿಸಿಲ್ಲ. ಇಂತಹ ಸಂದರ್ಭದಲ್ಲಿ ಪತಿ ವಿತರಿಸಿದ ಚೆಕ್ ನ ಬೌನ್ಸ್ ಪ್ರಕರಣದಲ್ಲಿ ಅರ್ಜಿದಾರೆಯನ್ನು ಆರೋಪಿ ಮಾಡಲಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, “ಅರ್ಜಿದಾರೆ ವಿರುದ್ಧ 2017ರ ಡಿಸೆಂಬರ್ 8ರಂದು 22ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾದ ದೂರು ರದ್ದುಪಡಿಸಿರುವ ಹೈಕೋರ್ಟ್, ಈ ಆದೇಶವು ಅರ್ಜಿದಾರೆಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.