ಮೈಸೂರು: ಈಗಾಗಲೇ ತಿಳಿಸಿರುವಂತೆ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ‘ಚುನಾವಣೆ ಸಂಬಂಧ ಸೆಕ್ಟರ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಸಭೆ’ಯಲ್ಲಿ ಅವರು ಮಾತನಾಡಿದರು.
ಮತದಾನ ಮಾಡಲು ಆಗಮಿಸುವ ಮತದಾರರಿಗೆ ಕುಡಿಯುವ ನೀರು,ನೆರಳು,ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಬಹಳ ಅವಶ್ಯಕವಾಗಿದೆ. ಮತಗಟ್ಟೆಯಲ್ಲಿ ವಿದ್ಯುತ್ ಸೌಲಭ್ಯವು ಬಹಳ ಮುಖ್ಯವಾಗಿದ್ದು, ಈ ಸೌಕರ್ಯಗಳನ್ನು ಒದಗಿಸಲಾಗಿದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದಲ್ಲಿ ಶೀಘ್ರವೇ ಒದಗಿಸಿ ಎಂದರು.
ಚುನಾವಣಾ ಅಭ್ಯರ್ಥಿ ಅಥವಾ ಪಕ್ಷದ ಕಡೆಯಿಂದ ಊಟ, ಮದ್ಯ ಸೇರಿದಂತೆ ಉಡುಗೊರೆ ವಿತರಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ, ವಶಪಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ವೃದ್ಧರು ಹಾಗೂ ವಿಶೇಷಚೇತನರ ಮತದಾನಕ್ಕೆ ಯಾವ ರೀತಿಯಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಪಡೆದರಲ್ಲದೇ, ಮತದಾನ ದಿನದಂದು ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಚುನಾವಣಾ ವೀಕ್ಷಕರಾದ ಯಶೂ ರೂಷ್ಟೋಗಿ, ಚುನಾವಣಾ ಅಧಿಕಾರಿ ಸುಪ್ರೀಯಾ ಬನಗಾರ್, ತಹಶೀಲ್ದಾರ್ ಕುಂಇ ಅಹಮದ್, ಕಾರ್ಯನಿರ್ವಾಹಕ ಅಧಿಕಾರಿ ಎಂ.ಗಂಗಣ್ಣ ಹಾಜರಿದ್ದರು.