ತನ್ನದೇ ಆದ ಒಂದು ಹೋಟೆಲ್ ಮಾಡ ಬೇಕು, ಆ ಮೂಲಕ ರುಚಿ ರುಚಿಯಾದ ಅಡುಗೆಯನ್ನು ಗ್ರಾಹಕರಿಗೆ ನೀಡಬೇಕು ಎಂದು ಕನಸು ಕಂಡು ಅದಕ್ಕಾಗಿ ಶ್ರಮಿಸು ವವನು ಚಿದಂಬರ. ಇದಕ್ಕಾಗಿ ತನ್ನದೇ ಹಾದಿಯಲ್ಲಿ ಸಾಗುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಶಾಕ್ ಒಂದು ಎದುರಾಗುತ್ತದೆ. ಏನೋ ಆಗ ಬಹುದು ಎಂದುಕೊಂಡವನಿಗೆ ಇನ್ನೇನೋ ಆಗಿ, ದೊಡ್ಡ ತಲೆಬಿಸಿಯೇ ಎದುರಾಗುತ್ತದೆ. ಅಲ್ಲಿಂದ ಮತ್ತೂಂದು ಆಯಾಮ..
ಈ ವಾರ ತೆರೆಕಂಡಿರುವ “ಶೆಫ್ ಚಿದಂಬರ’ ಒಂದು ಡಾರ್ಕ್ ಕಾಮಿಡಿ ಕಂ ಥ್ರಿಲ್ಲರ್ ಪ್ರಯತ್ನ. ಚಿದಂಬರ ಎಂಬ ಶೆಫ್ನ ಜೀವನದಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾದ ಹೈಲೈಟ್.
ನಿರ್ದೇಶಕ ಆನಂದ್ ರಾಜ್, ಒಂದಷ್ಟು ಕುತೂಹಲಕಾರಿ ಅಂಶಗಳೊಂದಿಗೆ ಈ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ ಸಿನಿಮಾದಲ್ಲಿ ಒಂದಷ್ಟು ಟ್ವಿಸ್ಟ್-ಟರ್ನ್ಗಳ ಜೊತೆ ಕಾಮಿಡಿಯನ್ನು ಬೆರೆಸಿದ್ದಾರೆ. ಹಾಗಾಗಿ, ಸಿನಿಮಾ ಕುತೂಹಲದ ಜೊತೆಗೆ ನಗು ಉಕ್ಕಿಸುತ್ತಾ ಮುಂದೆ ಸಾಗುತ್ತದೆ. ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಒಂದು ಕೊಲೆಯಿಂದ ಆರಂಭವಾಗುವ ಕಥೆ ಮುಂದೆ ಸಾಗುತ್ತಾ ಹಲವು ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಮುಗ್ಧ ಚಿದಂಬರನನ್ನು ಯಾರ್ಯಾರು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ, ಅದಕ್ಕೆ ಆತನ ಪ್ರತಿಕ್ರಿಯೆ ಏನು ಎಂಬ ಸನ್ನಿವೇಶಗಳೊಂದಿಗೆ ಚಿತ್ರ ಸಾಗುತ್ತದೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್‌ನ ಚಿತ್ರ. ಸಿದ್ಧಸೂತ್ರಗಳನ್ನು ಬಿಟ್ಟು ಈ ಸಿನಿಮಾ ಮಾಡಿರುವುದು ಸಿನಿಮಾದ ಪ್ಲಸ್. ಜೊತೆಗೆ ನೈಜವಾದ ಸಂಭಾಷಣೆಯೂ ಸಿನಿಮಾದ ಕಥೆಗೆ ಸಾಥ್ ನೀಡಿದೆ.
ಇನ್ನು, ಅನಿರುದ್ಧ್ ಅವರು ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿಧಿ ಸುಬ್ಬಯ್ಯ ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ರಚೆಲ್ ಡೇವಿಡ್
ಅವರ ಪಾತ್ರ ಕೂಡ ವಿಭಿನ್ನವಾಗಿದೆ. ಶರತ್ ಲೋಹಿತಾಶ್ವ, ಶಿವಮಣಿ, ಮಹಾಂತೇಶ್ ಮುಂತಾದ ವರು ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಪ್ರಯತ್ನವಾಗಿ “ಶೆಫ್ ಚಿದಂಬರ’ನನ್ನು ಮೆಚ್ಚಬಹುದು.