ಚೆನ್ನೈ(ತಮಿಳುನಾಡು): ಚೆನ್ನೈನ ಮರೀನಾ ಬೀಚ್ ನಲ್ಲಿ ಭಾನುವಾರ ನಡೆದ ಮೆಗಾ ವೈಮಾನಿಕ ಪ್ರದರ್ಶನದಲ್ಲಿ (ಏರ್ ಶೋ) ದುರಂತ ಸಂಭವಿಸಿದೆ.
ಲೋಹದ ಹಕ್ಕಿಗಳ ಹಾರಾಟದ ಸೊಬಗನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸೇರಿದ್ದರಿಂದ ಅಗಾಧ ಜನಸಂದಣಿಯಿಂದಾಗಿ ನಾಲ್ವರು ಮೃತಪಟ್ಟಿದ್ದು, 230 ಜನರು ನಿತ್ರಾಣರಾದ ಘಟನೆ ನಡೆದಿದೆ.
ಹೀಟ್ ಸ್ಟ್ರೋಕ್ ಸಾವಿಗೆ ಕಾರಣ ಎಂದು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಮೃತರನ್ನು ಜಾನ್ (56), ಕಾರ್ತಿಕೇಯನ್, ಶ್ರೀನಿವಾಸನ್ ಮತ್ತು ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಇವರೆಲ್ಲ ಏರ್ ಶೋ ವೀಕ್ಷಿಸಲು ಬಂದಿದ್ದರು, ಅಲ್ಲಿ ಹೆಚ್ಚಿನ ಜನಸಮೂಹ ಸೇರಿದ್ದರಿಂದ ವಿಪರೀತ ಸೆಖೆಯ ನಡುವೆ ಉಸಿರುಗಟ್ಟುವಿಕೆ, ಒತ್ತಡದಿಂದ ಅಸ್ವಸ್ಥರಾಗಿದ್ದರು. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಚೆನ್ನೈನ ಸರ್ಕಾರಿ ಆಸ್ಪತ್ರೆಯ ಅಟೆಂಡೆಂಟ್ ಹೇಳಿದ್ದಾರೆ.
ವೈಮಾನಿಕ ಪ್ರದರ್ಶನ ವೀಕ್ಷಿಸಲು 15 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು ಎಂದು ಅಂದಾಜಿಸಲಾಗಿದ್ದು, ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಮೆಟ್ರೋ ಮತ್ತು ರೈಲು ನಿಲ್ದಾಣಗಳನ್ನು ತಲುಪಲು ಅನೇಕರು ಮೈಲುಗಟ್ಟಲೇ ನಡೆದುಕೊಂಡು ಹೋಗಿದ್ದಾರೆ. ಆಂಬ್ಯುಲೆನ್ಸ್‌ಗಳು ಸಕಾಲಿಕ ಸೇವೆ ಒದಗಿಸಲು ಜನರಿಂದ ತುಂಬಿದ ಮಾರ್ಗಗಳಲ್ಲಿ ಸಂಚರಿಸಲಾಗದೆ ಹೆಣಗಾಡುವಂತಾಗಿತ್ತು. ಚೆನ್ನೈ ಪೊಲೀಸರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಸೂಕ್ತ ತುರ್ತು ಸೇವೆ ನೀಡಲು ಸಾಧ್ಯವಾಗಲಿಲ್ಲ.