ಮನೆ ರಾಷ್ಟ್ರೀಯ ಛತ್ತೀಸ್ ಗಢ: ಬೋರ್ ವೆಲ್‌ ನಲ್ಲಿ ಬಿದ್ದ ಬಾಲಕನ ರಕ್ಷಣೆಗೆ 42 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ

ಛತ್ತೀಸ್ ಗಢ: ಬೋರ್ ವೆಲ್‌ ನಲ್ಲಿ ಬಿದ್ದ ಬಾಲಕನ ರಕ್ಷಣೆಗೆ 42 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ

0

ಜಾಂಜ್ ಗಿರ್: ಛತ್ತೀಸ್ ಗಢದ ಜಾಂಜ್ ಗಿರ್ – ಚಂಪಾ ಜಿಲ್ಲೆಯಲ್ಲಿ ಬೋರ್ ವೆಲ್ ನಲ್ಲಿ ಬಿದ್ದ 11 ವರ್ಷದ ಬಾಲಕನನ್ನು ರಕ್ಷಿಸಲು ಕಳೆದ 42 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಬೋರ್‌ ವೆಲ್‌ ನಲ್ಲಿ ಬಿದ್ದಿರುವ ಯುವಕನನ್ನು ರಾಹುಲ್ ಎಂದು ಗುರುತಿಸಲಾಗಿದೆ. ನಡುನಡುವೆ ಕ್ಯಾಮರಾದಲ್ಲಿ ರಾಹುಲ್ ಚಲನವಲನ ಗಮನಿಸಲಾಗುತ್ತಿದೆ. ರಾಹುಲ್ ಆರೋಗ್ಯದ ಬಗ್ಗೆ ಕಲೆಕ್ಟರ್ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯಕೀಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಕಚೇರಿ ಪ್ರಕಾರ ಮುಂದಿನ 3 ರಿಂದ 4 ಗಂಟೆಗಳು ರಾಹುಲ್ ರಕ್ಷಣೆಯಲ್ಲಿ ಪ್ರಮುಖ ಸಮಯವಾಗಿದೆ. 

ರಾಹುಲ್ ನನ್ನು ಸುರಕ್ಷಿತವಾಗಿ ಹೊರತರಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ನೂರಾರು ಅಧಿಕಾರಿಗಳು, ನೌಕರರ ತಂಡ ಬೋರ್ ವೆಲ್ ವರೆಗೆ ಸುರಂಗ ಮಾರ್ಗ ನಿರ್ಮಿಸುವ ಕೆಲಸ ಮಾಡುತ್ತಿದೆ. ಮಗುವನ್ನು ಹೊರತೆಗೆಯಲು ಬೋರ್ ವೆಲ್ ನಿಂದ ಸ್ವಲ್ಪ ದೂರದಲ್ಲಿಸಮಾನಾಂತರ ಹೊಂಡವನ್ನು ತೋಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಭಾರತೀಯ ಸೇನೆಯ ತಜ್ಞರ ಸಹಾಯ ಪಡೆಯಲಾಗುತ್ತಿದೆ. 

ಅದೇ ಸಮಯದಲ್ಲಿ ವೈದ್ಯರ ತಂಡವೂ ರಾಹುಲ್ ಗೆ ಬೋರ್ ವೆಲ್ ಒಳಗೆ ಆಮ್ಲಜನಕ ತಲುಪಿಸುವ ವ್ಯವಸ್ಥೆ ಮಾಡಿದೆ. ಹಸ್ತಚಾಲಿತ ಕ್ರೇನ್ ಮೂಲಕ ಕಳುಹಿಸಲಾದ ಕೊಕ್ಕೆ ಮತ್ತು ಹಗ್ಗದ ಮೂಲಕವೂ ರಾಹುಲ್ ನನ್ನು ಮೇಲೆತ್ತಲು ಎನ್ ಡಿಆರ್ ಎಫ್ ತಂಡ ಕಳೆದ 12 ಗಂಟೆಗಳಿಂದ ಪ್ರಯತ್ನವನ್ನು ಮುಂದುವರೆಸಿದೆ.

ರಾಹುಲ್ ಹಗ್ಗವನ್ನು ಹಿಡಿದರೆ ಅದರ ಸಹಾಯದಿಂದ ಆತನನ್ನು ಮೇಲಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ. ಶುಕ್ರವಾರ ಮಧ್ಯಾಹ್ನ ರಾಹುಲ್ ಸಾಹು, ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದಾಗ ತೆರೆದ ಬೋರ್ ವೆಲ್ ನಲ್ಲಿ ಬಿದ್ದಿದ್ದು, ಸುಮಾರು 70 ರಿಂದ 80 ಅಡಿ ಆಳದಲ್ಲಿ ಸಿಕ್ಕಿ ಬಿದ್ದಿದ್ದಾನೆ.