ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಉಸೂರಿನ ಅರಣ್ಯ ಪ್ರದೇಶದಲ್ಲಿ ಭಾನುವಾರ ಸ್ಫೋಟಕ್ಕೆ ಹೊಂಚು ಹಾಕಿ ಕುಳಿತಿದ್ದ 8 ಮಂದಿ ನಕ್ಸಲೀಯರನ್ನು ಭದ್ರತಾ ಪಡೆ ಬಂಧಿಸಿದೆ. ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಗ ಮದ್ವಿ, ದೇವ ಸೋಧಿ, ಗುಡ್ಡಿ ಮದ್ವಿ, ಚುಲಾ ಹೇಮಲ, ಸುಕ್ಕ ಸೋದಿ, ಪೈಕಿ ಮಡಕಂ, ಸುಕ್ಕ ಕುಂಜಂ, ಮಲ್ಲ ಮಧ್ಯಮ ಬಂಧಿತ ನಕ್ಸಲರು.
ಇವರು ಉಸುರು-ಟೆಕ್ಮೆಟ್ಲಾ ಅರಣ್ಯಕ್ಕೆ ಹೋಗುವ ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ್ಕೆ (ಐಇಡಿ- ಸುಧಾರಿತ ಸ್ಫೋಟಕ ಸಾಧನ) ಸಂಚು ಹಾಕಿ ಕುಳಿತಿದ್ದರು. ಅನುಮಾನದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಶೋಧ ಕೈಗೊಂಡಾಗ ಸಂಚು ಬಯಲಾಗಿದೆ.
ಡಿಆರ್‌ಜಿ ಹಾಗೂ ಪೊಲೀಸ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಟಿಫಿನ್ ಬಾಂಬ್, ಜಿಲೆಟಿನ್ ಸ್ಟಿಕ್ಸ್, ಎಲೆಕ್ಟ್ರಿಕ್ ಫ್ಯೂಸ್ ವೈರ್ ಮತ್ತು ಮಾವೋವಾದಿಗಳ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಬಿಜಾಪುರ ಡಿಎಸ್ಪಿ ಸುದೀಪ್ ಸರ್ಕಾರ್ ಮಾಹಿತಿ ನೀಡಿದರು.
ಕಳೆದ ಮೂರು ದಿನಗಳಿಂದ ಕಂಕೇರ್ನಲ್ಲಿ ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈವರೆಗೆ ಐವರು ನಕ್ಸಲೀಯರು ಹತರಾಗಿದ್ದಾರೆ. ಇವರ ಮೃತದೇಹಗಳನ್ನು ಕಂಕೇರ್‌ಗೆ ತರಲಾಗಿದೆ. ಭಾನುವಾರವೂ ಸಹ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಹಲವು ಬಾರಿ ಗುಂಡಿನ ಚಕಮಕಿ ನಡೆದಿದೆ. ಆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಸುದೀಪ್ ಸರ್ಕಾರ್ ತಿಳಿಸಿದ್ದಾರೆ.