ಮನೆ ಆರೋಗ್ಯ ಕಡಬದ ಮಕ್ಕಳಲ್ಲಿ ಚಿಕನ್ ​ಪಾಕ್ಸ್: 15 ಮಕ್ಕಳಲ್ಲಿ ಸೋಂಕು ದೃಢ

ಕಡಬದ ಮಕ್ಕಳಲ್ಲಿ ಚಿಕನ್ ​ಪಾಕ್ಸ್: 15 ಮಕ್ಕಳಲ್ಲಿ ಸೋಂಕು ದೃಢ

0

ಕಡಬ/ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ‌ ಇದೀಗ ಶಾಲಾ ಮಕ್ಕಳಲ್ಲಿ ಚಿಕನ್​ಪಾಕ್ಸ್ ಆತಂಕ ಎದುರಾಗಿದೆ.

Join Our Whatsapp Group

ಜಿಲ್ಲೆಯ ಕಡಬ ಒಂದೇ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ 15ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ​ಪಾಕ್ಸ್ ಬಂದಿದೆ.

ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿ ಅನ್ವಯ ನೆಲ್ಯಾಡಿಯಲ್ಲಿ ಎರಡು ಶಾಲೆಗಳಲ್ಲಿ ಒಟ್ಟು ಒಂಬತ್ತು ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ ಒಂದು ಮಗುವಿಗೆ, ಲಾವತ್ತಡ್ಕದಲ್ಲಿ ಒಂದು ಮಗುವಿಗೆ, ಗೋಳಿತ್ತೊಟ್ಟುವಿನಲ್ಲಿ ಒಂದು ಮಗುವಿಗೆ ಸೇರಿದಂತೆ ಒಟ್ಟು 15 ಮಕ್ಕಳಿಗೆ ಚಿಕನ್​ಪಾಕ್ಸ್ ಹರಡಿರುವ ಬಗ್ಗೆ ಪ್ರಸ್ತುತ ಮಾಹಿತಿ ಲಭ್ಯವಾಗಿದೆ.

ರೋಗ ಹರಡಿರುವ ಶಾಲೆಗಳ ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಆದೇಶ ನೀಡಿದೆ. ರೋಗ ಕಡಿಮೆಯಾಗುವವರೆಗೂ ಮಕ್ಕಳಿಗೆ ರಜೆ ನೀಡುವಂತೆ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸದಂತೇ ಶಾಲೆಗಳಿಗೆ ಮತ್ತು ಪೋಷಕರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ವಿನಂತಿ ಮಾಡಿದ್ದಾರೆ.

ವೈದ್ಯಾಧಿಕಾರಿಗಳು ಹೇಳಿದ್ದೇನು?:

ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಚಿಕನ್​ ಪಾಕ್ಸ್ ​ಗೆ ಯಾವುದೇ ಕಾರಣಕ್ಕೂ ಹೆದರುವ ಅಥವಾ ಆತಂಕ ಪಡುವ ಅಗತ್ಯವಿಲ್ಲ. ಆದರೆ ಇದು ಬಹುಬೇಗ ಹರಡುವ ಸಾಧ್ಯತೆ ಇರೋದರಿಂದ ಮುನ್ನೆಚ್ಚರಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಇಲಾಖಾ ಸಿಬ್ಬಂದಿಯೆಲ್ಲಾ ಸಿದ್ಧತೆ ಕೈಗೊಂಡಿದ್ದಾರೆ. ಮಕ್ಕಳಲ್ಲಿ ಹೆಚ್ಚಿನ ತಾಪಮಾನದ ಜ್ವರ ಉಂಟಾಗುವ ಕಾರಣ ವೈದ್ಯಕೀಯ ತಜ್ಞರ ಸಲಹೆ ಪಡೆದು ತಾಪಮಾನವನ್ನು ಕಡಿಮೆ ಮಾಡಲು ಪ್ಯಾರೆಸಿಟಮಾಲ್ ಅನ್ನು ನೀಡಬಹುದು. ಮಕ್ಕಳಿಗೆ ಚಳಿ ಅಥವಾ ಹೆಚ್ಚು ಬಿಸಿಯಾಗದಂತೆ ಹತ್ತಿ ಬಟ್ಟೆಗಳನ್ನು ಇಡಬಹುದು.

ಹೆಚ್ಚಾಗಿ ತುರಿಕೆ ಉಂಟಾಗುವುದರಿಂದ ಕ್ಯಾಲಮೈನ್ ಲೋಷನ್/ಎಮೋಲಿಯಂಟ್ ಲೋಷನ್‌ನಂತಹ ಬಾಡಿ ಕ್ರೀಮ್‌ಗಳನ್ನು ವೈದ್ಯರ ಸಲಹೆಯಂತೆ ಹಚ್ಚಬಹುದು. ವೈದ್ಯಕೀಯ ತಜ್ಞರನ್ನು ಭೇಟಿಯಾಗಿ ಅಸಿಕ್ಲೋವಿರ್ ನಂತಹ ಆಂಟಿವೈರಲ್ ಔಷಧ ಅಥವಾ ಲಸಿಕೆಯನ್ನು ಪಡೆದುಕೊಳ್ಳಬಹುದು. ಹೆಚ್ಚಾಗಿ ಹಣ್ಣು ಹಂಪಲುಗಳು ನೀಡುವುದು. ತಂಪಾದ ಆಹಾರ ವಸ್ತುಗಳನ್ನು ನೀಡುವ ಮೂಲಕ ದೇಹವನ್ನು ತಂಪಾಗಿರಿಸಲು ಪ್ರಯತ್ನಿಸಬೇಕು. ದೇಹದಲ್ಲಿ ಆಳವಾದ ಗೀರುಗಳನ್ನು ಮಾಡಲು ಬಿಡದಂತೆ ಮಕ್ಕಳ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಬೇಕು ಎಂದು ಹೇಳಿದರು.