ಮನೆ ರಾಜ್ಯ ಯರಗೋಳ್‌ ಜಲಾಶಯ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಯರಗೋಳ್‌ ಜಲಾಶಯ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬಂಗಾರಪೇಟೆ (ಕೋಲಾರ): ಕೋಲಾರ ನಗರ, ಬಂಗಾರಪೇಟೆ ಹಾಗೂ ಮಾಲೂರು ಪಟ್ಟಣಗಳ ಜನರಿಗೆ ಕುಡಿಯುವ ನೀರು ಪೂರೈಸಲಿರುವ ಯರಗೋಳ್‌ ಜಲಾಶಯವನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ತಾಲ್ಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ನಂತರ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ  2,263 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

1,656 ಕೋಟಿ ವೆಚ್ಚದ 43 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ  607 ಕೋಟಿ ವೆಚ್ಚದ 21 ಕಾಮಗಾರಿಗಳ ಉದ್ಘಾಟನೆ ಇದರಲ್ಲಿ ಸೇರಿದೆ.

ಯರಗೋಳ್ ಗ್ರಾಮದ ಬಳಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯದಿಂದ ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿದ್ದ ನೀರು ತಡೆಗಟ್ಟಲು ಈ ಯೋಜನೆ ಜಾರಿ ಮಾಡಲಾಗಿದೆ. ಕುಡಿಯುವ ನೀರಿಗೆ ಮೀಸಲಾದ ಜಿಲ್ಲೆಯ ಏಕೈಕ ಯೋಜನೆ ಇದಾಗಿದೆ.

ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಜಲಾಶಯ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ಸುಮಾರು 308.46 ಕೋಟಿ ವೆಚ್ಚವಾಗಿದೆ.‌

2006ರಲ್ಲಿ ಜೆಡಿಎಸ್‌–ಬಿಜೆಪಿ ಸರ್ಕಾರದಲ್ಲಿ ಯೋಜನೆಗೆ ಅನುಮೋದನೆ ಸಿಕ್ಕಿತ್ತು. 2007ರ ಆಗಸ್ಟ್‌ ನಲ್ಲಿ ಕೋಲಾರದಲ್ಲಿ ಶಂಕುಸ್ಥಾಪನೆ ಆಯಿತು. ಆದರೆ, ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದ್ದು ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. 2013ರ ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಂತರ ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಗಿ 2020ರಲ್ಲಿ ಪೂರ್ಣಗೊಂಡಿತು.