ಮನೆ ರಾಜ್ಯ ಮುಖ್ಯಮಂತ್ರಿಗಳಿಂದ ರೈತ ಹೋರಾಟ ಹತ್ತಿಕ್ಕುವ ಯತ್ನ: ಕುರುಬೂರು ಶಾಂತಕುಮಾರ್

ಮುಖ್ಯಮಂತ್ರಿಗಳಿಂದ ರೈತ ಹೋರಾಟ ಹತ್ತಿಕ್ಕುವ ಯತ್ನ: ಕುರುಬೂರು ಶಾಂತಕುಮಾರ್

0

ಮೈಸೂರು: ರೈತರ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆದರೆ, ಅಧಿಕಾರಕ್ಕೆ ಬಂದನಂತರ ರೈತರ ಹೋರಾಟವನ್ನು ದಮನ ಮಾಡಲು ಹೊರಟಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಇಂದು ಗುರುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಸಿದ್ದರಾಮಯ್ಯನವರ ಮೈಸೂರು ನಿವಾಸದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ರೈತರು ಧರಣಿ ಪ್ರತಿಭಟನೆ ನಡೆಸುವ ಬಗ್ಗೆ ಮೊದಲೇ ತಿಳಿಸಲಾಗಿತ್ತು. ಆದರೂ ಪೊಲೀಸ್ ಬಲ ಪ್ರಯೋಗ ಮಾಡಿ ರೈತರನ್ನು ಬಂಧಿಸಲಾಯಿತು. ಸಿದ್ದರಾಮಯ್ಯನವರು ಸ್ವಂತ ಜಿಲ್ಲೆಯ ರೈತರ ಮನವಿಗಳಿಗೆ ಸ್ಪಂದಿಸುತ್ತಿಲ್ಲ. ಮೈಸೂರು ಜಿಲ್ಲೆಯ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನು ಬಿಟ್ಟು ಜನರ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ವರ್ಗಾವಣೆ ಕುರಿತು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವೀಡಿಯೋ ವೈರಲ್ ವಿಚಾರ ಕುರಿತು ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು.

ಎಲ್ಲೆಂದರಲ್ಲಿ ಮನಬಂದಂತೆ ಮಾತನಾಡಬಾರದು. ವಿರೋಧ ಪಕ್ಷಗಳು ಈ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಮೂರು ಪಕ್ಷಗಳು ಜನರ ಸಮಸ್ಯೆಗಳತ್ತ ಗಮನ ನೀಡುತ್ತಿಲ್ಲ. ಹಾಗಾಗಿ ರಾಜ್ಯದ ಜನರು ಸಹ ಆಡಳಿತ ಹಾಗು ವಿರೋಧ ಪಕ್ಷಗಳ ಮೇಲೆ ನಂಬಿಕೆ ಇಟ್ಟಿಲ್ಲ. ಪಕ್ಷಗಳು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿವೆ. ಮೊದಲು ರಾಜ್ಯದ ರೈತರ ಸಮಸ್ಯೆಗಳ ಕುರಿತು ವಿಪಕ್ಷಗಳು ಹೋರಾಟ ಮಾಡಲಿ. ರಾಜಕೀಯ ಮಾಡಲು ಸಣ್ಣ ವಿಚಾರವನ್ನೇ ದೊಡ್ಡದಾಗಿ ಮಾಡುವುದು ಸರಿಯಲ್ಲ ಎಂದರು.